

ಅರಕೇರಾ: ನಾಗಡದಿನ್ನಿ ಬಳಿಯಿರುವ ಬಂಗಾರಪ್ಪ ಕೆರೆ ಬಳಿ ಶನಿವಾರದಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೆರೆಯಿಂದ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಾಲೆ ಕೊನೆಯ ಭಾಗದ ರೈತರು ಮನವಿ ಸಲ್ಲಿಸಿದ್ದರು. ನೀರು ಹರಿಸದಿದ್ದರೆ ಬಂಗಾರಪ್ಪ ಕೆರೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ರೈತರು ಶನಿವಾರ ಪ್ರತಿಭಟನೆ ನಡೆಸಲಿಲ್ಲ. ಆದರೆ, ಭಾನುವಾರವೂ ಪೊಲೀಸರು ಬಂಗಾರಪ್ಪ ಕೆರೆ ಬಳಿ ಬೀಡು ಬಿಟ್ಟಿದ್ದರು.
ಕುಡಿಯುವ ನೀರಿಗೆ ಹಾಹಾಕಾರ: ಬಂಗಾರಪ್ಪ ಕೆರೆಯಲ್ಲಿ 32 ಅಡಿ ನೀರು ಸಂಗ್ರಹ ಸಾಮರ್ಥ್ಯವಿದ್ದು, 12 ಅಡಿ ನೀರು ಸಂಗ್ರಹವಿದೆ. ಕೆರೆಯಿಂದ ರಾಯಚೂರು ನಗರ ಹಾಗೂ ಸುಮಾರು 32 ಹಳ್ಳಿಗಳಿಗೆ ಕುಡಿಯಲು ನೀರು ಪೂರೈಕೆಯಾಗುತ್ತಿದೆ. ಲಭ್ಯ ಅಲ್ಪ ನೀರನ್ನು ಕೃಷಿಗಾಗಿ ಕಾಲುವೆಗೆ ಹರಿಸಿದರೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಲಿದೆ. ಇದರಿಂದಾಗಿ ಕೆರೆಯಲ್ಲಿನ ನೀರನ್ನು ಕುಡಿಯುವುದಕ್ಕೆ ಪೂರೈಕೆಸಲು ಮೀಸಲಿಡಲಾಗಿದೆ ಎಂಬುದು ನೀರಾವರಿ ಇಲಾಖೆ ಎಇಇ ವಿದ್ಯಾಸಾಗರ ತಿಳಿಸಿದರು.