

ಶಿವಮೊಗ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಸೇವೆಗೆ ಸೇರಲು ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಸಲುವಾಗಿ ಶೇ.15ರಷ್ಟು ಕೃಪಾಂಕ ನೀಡುವುದರ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳ ಬಾಳನ್ನು ಬೆಳಗಿದವರು ಮಾಜಿ ಸಿಎಂ ಎಸ್.ಬಂಗಾರಪ್ಪ ಎಂದು ದೀನಬಂಧು ಸೇವಾಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಶೆಟ್ಟಿ ಹೇಳಿದರು.
ಭದ್ರಾವತಿ ತಾಲೂಕಿನ ಶಂಕರಘಟ್ಟದ ದೀನಬಂಧು ಸೇವಾ ಟ್ರಸ್ಟ್‌ನಿಂದ ಗುರುವಾರ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಜನ್ಮದಿನದ ಅಂಗವಾಗಿ ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಆಗಿನ ಸಮಯದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳ ಸಮನಾಗಿ ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಸರ್ಕಾರಿ ಸೇವೆಯಿಂದ ವಂಚಿತರಾಗುತ್ತಿದ್ದನ್ನು ಮನಗಂಡು ಕೃಪಾಂಕ ನೀಡುವಂತಹ ಐತಿಹಾಸಿಕ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಬದುಕಿಗೆ ನೆಲೆ ಕಂಡುಕೊಂಡರು ಎಂದರು.
ಇಷ್ಟೆ ಅಲ್ಲದೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಬಡವರಿಗೆ ಮನೆ ಕಟ್ಟಿ ಕೊಡುವ ಆಶ್ರಯ, ಅಕ್ಷಯ, ಆರಾಧನಾ, ವಿಶ್ವ ಇಂತಹ ಹತ್ತಾರು ಕಾರ್ಯಕ್ರಮಗಳ ಮೂಲಕ ಸಮಾಜ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಮಾಡಿದ ಕೀರ್ತಿ ಬಂಗಾರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ಸಿಂಗನಮನೆ ಗ್ರಾಪಂ ಅಧ್ಯಕ್ಷೆ ಮಂಜುಳಮ್ಮ, ತಾವರಘಟ್ಟ ಗ್ರಾಪಂ ಉಪಾಧ್ಯಕ್ಷ ಗಿರೀಶ್, ಮುಖಂಡರಾದ ಮುರುಗೇಶ್, ಶಶಿಕುಮಾರ್, ಕವಿತಾ ರುದ್ರೇಶ್, ಅಶ್ವಿನಿ ಶಶಿಕುಮಾರ್, ಲಲಿತಮ್ಮ, ಲಕ್ಷ್ಮಮ್ಮ, ತಿಪ್ಪೇರುದ್ರಸ್ವಾಮಿ, ಮಂಟಲಿಂಗಯ್ಯ, ಶ್ರೀಕಾಂತ್ ಉಪಸ್ಥಿತರಿದ್ದರು.