

ಬಂಗಾರಪೇಟೆ: ಅಪರಾಧಮುಕ್ತ ಸಮಾಜ ನಿರ್ವಾಣಕ್ಕೆ ಪೊಲೀಸ್ ಇಲಾಖೆ ಬದ್ಧವಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಇರುವ ಕಾನೂನುಗಳನ್ನು ತಪ್ಪದೇ ಪರಿಪಾಲನೆ ಮಾಡಬೇಕು ಎಂದು ಸಬ್ ಇನ್‌ಸ್ಪೆಕ್ಟರ್ ಸುನೀಲ್ ಐರೋಡಗಿ ಹೇಳಿದರು.
ತಾಲೂಕಿನ ಬೂದಿಕೋಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆ ಶ್ರಮಿಸಲು ಸಿದ್ಧರಿದ್ದಾರೆ. ಇದರೊಟ್ಟಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಸಂಪೂರ್ಣ ಅಪರಾಧಮುಕ್ತ ಸಮಾಜ ಮಾಡಲು ಸಾಧ್ಯ ಎಂದರು.
ಸಂಚಾರಿ ನಿಯಮಗಳಿರುವುದು ಸಾರ್ವಜನಿಕರನ್ನು ಶಿಕ್ಷಿಸಲು ಅಲ್ಲ, ಬದಲಾಗಿ ಜನರ ಜೀವ ರಕ್ಷಣೆ ಮಾಡಲು ಎಂಬುದು ಗಮನಾರ್ಹ. ಹಾಗಾಗಿ ಪ್ರತಿಯೊಬ್ಬರು ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಹಾನಿಯಾಗುವುದು ಕಡಿಮೆ. ಮದ್ಯಪಾನ ಸೇವಿಸಿ ವಾಹನ ಚಾಲನೆ, ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಸಹ ಅಪರಾಧವಾಗಿದೆ. ಹೀಗಾಗಿ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪಟ್ಟಣದ ನಿವಾಸಿಗಳು ಅಥವಾ ಹೊರವಲಯದ ಮನೆಗಳನ್ನು ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಗೃಹ ರಕ್ಷಕ ತಂತ್ರಾಂಶದಲ್ಲಿ ನಿಮ್ಮ ಮನೆಯಿರುವ ಸ್ಥಳದ ವಾಹಿತಿ ಸೇರ್ಪಡೆ ಮಾಡಬೇಕು. ಆಗ ಪೊಲೀಸ್ ಗಸ್ತು ನೀಡಲಾಗುವುದು. ಜತೆಗೆ ತಮ್ಮ ಮನೆ, ವಾಸ ಸ್ಥಳದ ಸುತ್ತ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.