ಪೊಲೀಸ್ ಆಯುಕ್ತರ ಅಮಾನತು ಸ್ವಾಗತಾರ್ಹ

horatti
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಐಪಿಎಲ್ ಚಾಂಪಿಯನ್ ಆರ್​ಸಿಬಿ ತಂಡದ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿ ಹಲವರನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ್ತುಳಿತದಿಂದ 11ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಬೇಸರ ತರಿಸಿದೆ. ನನ್ನ 45 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಇಂತಹ ದುರ್ಘಟನೆಯನ್ನು ನೋಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಮತ್ತು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಇದೇ ಮೊದಲು. ಸಂಪೂರ್ಣ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮಕ್ಕೆ ಅವಕಾಶ ನೀಡಬೇಕಿತ್ತು. ಆದರೆ, ಇದ್ಯಾವುದನ್ನೂ ಮಾಡದ ಪೊಲೀಸ್ ಇಲಾಖೆ, ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದೇ ದುರ್ಘಟನೆಗೆ ಕಾರಣ ಎಂದು ಆರೋಪಿಸಿದ್ದು ಸರಿಯಲ್ಲ ಎಂದರು.

ವಿಜಯೋತ್ಸವದ ವೇಳೆ 10 ರಿಂದ 15 ಲಕ್ಷ ಜನ ಸೇರುತ್ತಾರೆ ಎಂಬ ನಿರೀಕ್ಷೆ ಇತ್ತು. ಸರ್ಕಾರವೂ ಈ ಬಗ್ಗೆ ಲಕ್ಷ್ಯ ವಹಿಸಬೇಕಿತ್ತು. ಅಧಿಕಾರಿಗಳು ಸಂಭ್ರಮಾಚರಣೆಗೆ ಅವಕಾಶ ನೀಡಬಾರದಿತ್ತು. ಈ ಘಟನೆಯಿಂದ ಇಡೀ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ಮೃತರ ಸಂಖ್ಯೆ 13ಕ್ಕೆ ಏರಿದ್ದು, ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net