ಶಿಥಿಲಗೊಂಡ ನಾಡಕಚೇರಿ ಕಟ್ಟಡ: ಸರ್ಜಾಪುರ ಸಾರ್ವಜನಿಕರಿಗೆ ಕಚೇರಿಯಲ್ಲಿ ಕಿರಿಕಿರಿ

2
ನಾಡಕಚೇರಿ ಆವರಣದಲ್ಲಿ ಆಸನದ ವ್ಯವಸ್ಥೆ ಇಲ್ಲದಿರುವುದು, ಮಳೆಯಿಂದಾಗಿ ಕಚೇರಿ ಗೋಡೆಗಳು ಬಿರುಕು ಬಿಟ್ಟಿ ಮಳೆ ನೀರು ನಿಂತಿರುವುದು, ನಾಡಕಚೇರಿಯ ಕಟ್ಟಡದ ಗೋಡೆಗಳ ಮಧ್ಯೆ ಅರಳಿ ಮರಗಳು ಬೆಳೆದಿರುವುದು.
Published on

ಚಕ್ರವರ್ತಿ ವಿ.ಸರ್ಜಾಪುರ
ಸರ್ಜಾಪುರ ಹೋಬಳಿ ನಾಡಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಇತ್ತೀಚೆಗೆ ಮಳೆ ಸುರಿಯುತ್ತಿರುವ ಕಾರಣ ತೇವಾಂಶ ಹೆಚ್ಚಾಗಿ ಛಾವಣಿ ಹಾಗೂ ಗೋಡೆಯಿಂದ ಕಾಂಕ್ರೀಟ್ ಉದುರುತ್ತಿದೆ. ಹಾಗೆಯೇ, ಕೆಲಸಗಳಿಗಾಗಿ ಆಗಮಿಸುವ ಸಾರ್ವಜನಿಕರು ಕಚೇರಿಯೊಳಗೆ ಸ್ಥಳಾವಕಾಶ ಕೊರತೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. 40 ವರ್ಷಕ್ಕೂ ಹಳೆಯ ಕಟ್ಟಡವಾಗಿದ್ದು, ಈವರೆಗೂ ಕಟ್ಟಡದ ನವೀಕರಣವಾಗಲಿ ಅಥವಾ ಕನಿಷ್ಠಪಕ್ಷ ಸುಣ್ಣಬಣ್ಣವನ್ನೂ ಕಂಡಿಲ್ಲ. ಕಟ್ಟಡದ ಗೋಡೆಯಲ್ಲೇ ಅರಳಿಮರಗಳು ಬೇರು ಬಿಟ್ಟಿವೆ, ಇದರಿಂದ ಕೆಲವು ಗೋಡೆಗಳು ಕುಸಿಯುವ ಹಂತಕ್ಕೆ ತಲುಪಿವೆ.

72ಕ್ಕೂ ಹೆಚ್ಚು ಗ್ರಾಮಗಳಿಗೆ ಸೇವೆ: ನಾಡಕಚೇರಿಗೆ ದೊಮ್ಮಸಂದ್ರ, ನೆರಿಗಾ, ಮುಗಳೂರು, ಸರ್ಜಾಪುರ, ಬಿಲ್ಲಾಪುರ, ಹಂದೇನಹಳ್ಳಿ, ಶಾಂತಿಪುರ, ಹುಸ್ಕೂರು ಗ್ರಾಪಂನ 72ಕ್ಕೂ ಹೆಚ್ಚು ಗ್ರಾಮಗಳಿಗೆ ಸೇವೆ ಓದಗಿಸಲಾಗುತ್ತಿದೆ. ಆದರೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯೇ ಇಲ್ಲ. ಈ ಕಟ್ಟಡ 3 ಕೊಠಡಿ ಹೊಂದಿದ್ದರೂ ಸ್ಥಳಾವಕಾಶ ಕೊರತೆಯಿಂದ ಸಾರ್ವಜನಿಕರು ನಿಂತುಕೊಂಡೇ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ.
ಹಾಗೆಯೇ ಅಟಲ್‌ಜೀ ಜನಸ್ನೇಹಿ ಕೇಂದ್ರವೂ ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜನಸಂದಣಿ ಹೆಚ್ಚಿದ್ದರೂ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ.

ಶೌಚಗೃಹ ಸಮಸ್ಯೆ: ಕಟ್ಟಡದಲ್ಲಿ ಒಂದು ಶೌಚಗೃಹವಿದೆ. ಆದರೆ ಅದು ಅಧಿಕಾರಿಗಳ ಬಳಕೆಗೆ ಸೀಮಿತವಾಗಿದೆ. ಆದರೆ ಕಚೇರಿಗೆ ನಿತ್ಯ ದೂರದ ಊರಿನಿಂದ ಬರುವ ಸಾರ್ವಜನಿಕರಿಗೆ ಯಾವುದೇ ಮೂಲಸೌಲಭ್ಯ ಕಲ್ಪಿಸಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾಗಿಲ್ಲ.

ತುಕ್ಕು ಹಿಡಿದ ಸೋಲಾರ್: ಕಟ್ಟಡ ಮೇಲೆ ಸೋಲಾರ್ ಅಳವಡಿಸಿ ಹಲವು ವರ್ಷಗಳು ಕಳೆದರೂ ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡದ ಕಾರಣ ಅದು ತುಕ್ಕು ಹಿಡಿದು ಯಂತ್ರಗಳು ನಿಷ್ಕ್ರಿಯಗೊಂಡು ಉಪಯೋಗಕ್ಕೆ ಬಾರದಂತಾಗಿದ್ದು, ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ.

ಅಡ್ಡಾದಿಡ್ಡಿ ಪಾರ್ಕಿಂಗ್: ಸರ್ಜಾಪುರದ ನಾಡಕಚೇರಿಗೆ ಬರುವ ಸಾರ್ವಜನಿಕರ ವಾಹನ ನಿಲ್ಲಿಸಲು ಯಾವುದೇ ಪರ್ಯಾಯ ಪಾರ್ಕಿಂಗ್ ಜಾಗವಿಲ್ಲದ ಕಾರಣ ನಾಡಕಚೇರಿ ಮುಂಭಾಗದಲ್ಲಿ ರಸ್ತೆ ಉದ್ದಕ್ಕೂ ವಾಹನ ನಿಲುಗಡೆ ಮಾಡಲಾಗುತ್ತಿದೆ. ಪಕ್ಕದಲ್ಲೇ ಆಸ್ಪತ್ರ ಕೂಡ ಇರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿತ್ಯವೂ ಹಿಡಿಶಾಪ ಹಾಕುವಂತಾಗಿದೆ.


ನೂತನ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಮನವಿ ನೀಡಲಾಗಿದೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ನೂತನ ಕಟ್ಟಡ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
| ಮಹೇಶ್ ಉಪ ತಹಸೀಲ್ದಾರ್


ಸರ್ಜಾಪುರದ ಸರ್ವೇ ನಂ. 478ರಲ್ಲಿ ಸುಮಾರು 10 ಗುಂಟೆ ಜಾಗವನ್ನು ನಾಡಕಚೇರಿ ಕಟ್ಟಡಕ್ಕಾಗಿ ಸರ್ಕಾರ ಗುರುತಿಸಿ ಸುಮಾರು 12 ವರ್ಷ ಕಳೆದರೂ ಇದುವರೆಗೂ ನಿರ್ಮಾಣ ಮಾಡಿಲ್ಲ. ಕಂದಾಯ ಸಚಿವ ಆರ್.ಅಶೋಕ್ ಮತ್ತು ಜಿಲ್ಲಾಧಿಕಾರಿ ಈ ಭಾಗದಲ್ಲಿ ಕಾಯ್ದಿರಿಸಿರುವ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು.
| ಶಿವಕುಮಾರ್ ಸರ್ಜಾಪುರ ಗ್ರಾಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net