

ಆನೇಕಲ್: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ದೊಡ್ಡಮುತ್ತಾನಲ್ಲೂರಿನ ಅಮಾನಿಕೆರೆ ಕೋಡಿ ಹರಿದಿದ್ದು ಸುತ್ತಮುತ್ತ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.
ಕೆರೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಹೋಗುತ್ತಿದ್ದು ಮುತ್ತಾನಲ್ಲೂರಿನಿಂದ ಅಳಿಬೊಮ್ಮಸಂದ್ರ ಹಾಗೂ ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿದಿದ್ದು, ಮುನ್ನೆಚ್ಚರಿಕೆಯಾಗಿ ರಸ್ತೆ ಬಂದ್ ಮಾಡಿ ಪ್ರತ್ಯೇಕ ಮಾರ್ಗ ಕಲ್ಪಿಸಿ ಗ್ರಾಪಂನಿಂದ ನಾಮಲಕ ಹಾಕಲಾಗಿದೆ.
ಮುತ್ತಾನಲ್ಲೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಹಾಗೂ ಸ್ಥಳೀಯರು ಜೆಸಿಬಿ ಮೂಲಕ ಕೆರೆ ಸ್ವಚ್ಛತೆಗೆ ಮುಂದಾಗಿದ್ದಾರೆ. ಕೆರೆಯಲ್ಲಿ ಬೆಳೆದು ನಿಂತ ಆಳೆತ್ತರದ ಮರ, ಗಿಡಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ.
ಕೈಗಾರಿಕೆಗಳಿಂದ ಹೊರಬರುವ ಕೆಮಿಕಲ್ ನೀರು ಮುತ್ತಾನಲ್ಲೂರು ಕೆರೆ ಸೇರಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇದೀಗ ಮಳೆಯಿಂದಾಗಿ ಕೆರೆಯಲ್ಲಿ ಭಾರಿ ಪ್ರಮಾಣದ ನೀರ ಹೊರಬರುತ್ತಿರುವುದರಿಂದ ಸರಾಗವಾಗಿ ನೀರು ಹೊರ ಹೋಗಲು ಸಾಧ್ಯವಾಗದೇ ಅವಾಂತರ ಸೃಷ್ಟಿಸುವ ಸಾಧ್ಯತೆಯಿದೆ. ಕೂಡಲೇ ಕ್ರಮ ವಹಿಸಬೇಕು ಎಂದು ಸ್ಥಳೀಯರ ಆಗ್ರಹ.
ಹೊಳೆಯಂತೆ ಹರಿಯುತ್ತಿರುವ ನೀರು: ಹೆನ್ನಾಗರ ಕೆರೆ ತುಂಬಿ ಹರಿದು ಚಂದಾಪುರ ಕೆರೆ ಸೇರಿ, ಮುತ್ತಾನಲ್ಲೂ ಕೆರೆಗೆ ಒಳಹರಿವು ಹೆಚ್ಚಾಗಿರುವುದರಿಂದ ಮುತ್ತಾನಲ್ಲೂರಿನ ಕೋಡಿ ಬಳಿ ರಸ್ತೆಯ ಮೇಲೆ ನೀರು ಹೊಳೆಯಂತೆ ಹರಿಯುತ್ತಿದೆ.
ಮುತ್ತಾನಲ್ಲೂರಿನ ಯುವಕರು ತೆಪ್ಪದ ಮೂಲಕ ಕೆರೆ ಮಧ್ಯಕ್ಕೆ ತೆರಳಿ ಬೆಳೆದು ನಿಂತಿರುವ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡುತ್ತಿರುವುದು ಕಂಡುಬಂತು. ಕೆರೆ ತುಂಬಿ ಹರಿಯುತ್ತಿರುವ ಕೋಡಿಯಲ್ಲಿ ಮೀನುಗಳು ಕೆರೆಯಿಂದ ಹೊರಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮುತ್ತಾನಲ್ಲೂರು ಕೆರೆ ಕೋಡಿ ಬಳಿ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಅಳಿಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕಿತ್ತು ಹಾಳಾಗಿದ್ದು ಇನ್ನಷ್ಟು ಮಳೆಯಾದರೆ ರಸ್ತೆ ಸಂಪೂರ್ಣ ಹಾಳಾಗಿ ಕುಸಿದು ಹೋಗುವ ಸಾಧ್ಯತೆ ಇದೆ.