

ಬೆಂಗಳೂರು ಗ್ರಾಮಾಂತರ: ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಮೂರು ದಿನಗಳಿಂದ ತೋಯ್ದು ತೊಪ್ಪೆಯಂತಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ವಾಡಿಕೆಯಂತೆ ಮೂರು ದಿನಕ್ಕೆ 11.5 ಮಿಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 102.8 ಮಿಮೀ ಮಳೆ ಸುರಿದಿದ್ದು, ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ.
ಒಂದೆಡೆ ಮಳೆರಾಯ ರೈತಾಪಿ ವರ್ಗಕ್ಕೆ ಹರ್ಷದ ಹೊನಲು ಹರಿಸಿದ್ದರೆ, ಮತ್ತೊಂದೆಡೆ ತರಕಾರಿ, ಹೂವು ಬೆಳೆ ನೆಲಕಚ್ಚಿ ರೈತರ ಕಣ್ಣೀರಿಗೂ ಕಾರಣವಾಗಿದ್ದಾನೆ. ದಶಕಗಳಿಂದ ನೀರಿನ ಪಸೆಯನ್ನೇ ಕಾರಣದ ಕೆರೆಕುಂಟೆಗಳಲ್ಲಿ ನೀರು ಸಂಗ್ರಹವಾಗಿ ಬಯಲು ಸೀಮೆಯಲ್ಲಿ ಹಸಿರು ಮೈದಳೆಯುವಂತಾಗಿದೆ.
ಮೂರು ವರ್ಷದ ಹಿಂದೆ ಕೆರೆಗಳ ಹೂಳು ತೆಗೆಯುವ ಅಭಿಯಾನದಿಂದ ಜೀರ್ಣೋದ್ಧಾರಗೊಂಡಿದ ಕೆರೆಗಳ ಒಡಲಿನಲ್ಲಿ ಜಲರಾಶಿ ತುಂಬಿದೆ. ಆದರೆ ಜಮೀನುಗಳಲ್ಲಿ ಮಂಡಿಯುದ್ದ ನೀರು ನಿಂತು ಟೊಮ್ಯಾಟೊ ಸೇರಿ ತರಕಾರಿ ಬೆಳೆಗಳು ಕೊಳೆಯಲಾರಂಭಿಸಿವೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಹೂವಿನಿಂದ ಆರ್ಥಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತರನ್ನು ಮಳೆರಾಯ ಕಂಗೆಡೆಸಿದ್ದಾನೆ.
ಜನಜೀವನ ಅಸ್ತವ್ಯಸ್ಥ: ಮೂರು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಕಡೆಗಳಲ್ಲಿ ವಿದ್ಯುತ್‌ಕಂಬ ಮುರಿದು ಬಿದ್ದಿವೆ, ಮರಗಳ ಕೊಂಬೆಗಳು ಮುರಿದು ಬೀಳುತ್ತಿರುವುದರಿಂದ ತಾಸುಗಟ್ಟಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಡಾಂಬರು ಕಿತ್ತುಬಂದ ರಸ್ತೆಗಳಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆಗಳು ಸಣ್ಣಸಣ್ಣ ಕೆರೆಗಳಂತಾಗಿವೆ. ವಾಹನ ಸವಾರರು ರಸ್ತೆಯಲ್ಲಿ ಸಾಗಲು ಸರ್ಕಸ್ ಮಾಡುತ್ತಿದ್ದಾರೆ. ದೇವನಹಳ್ಳಿ, ದೊಡ್ಡಬಳ್ಳಾಪುರದ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಸಂಚಾಕಾರ ತಂದಿದೆ. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಹಬ್ಬದ ಸಾಮಾನು ಖರೀದಿಗೆ ಸಾರ್ವಜನಿಕರು ಪರದಾಡುವಂತಾಗಿದೆ.
ವಿಜಯಪುರದಲ್ಲಿ ಗುಂಡಿ ಗಂಡಾಂತರ: ಜೋರು ಮಳೆಯಿಂದಾಗಿ ಪಟ್ಟಣದ ಕೋಲಾರ ಮುಖ್ಯ ರಸ್ತೆ ಹಾಗೂ ಟೋಲ್‌ಗೇಟ್‌ನಿಂದ ಶಿಡ್ಲಘಟ್ಟ ಕ್ರಾಸ್ ಕಡೆಗೆ ಸಂಚರಿಸುವ ಮುಖ್ಯರಸ್ತೆಗಳಲ್ಲಿ ಮಂಡಿಯುದ್ದ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಬಸ್ ನಿಲ್ದಾಣದಲ್ಲಿ ಗುಂಡಿಗಳು ಬಿದ್ದಿವೆ. ಚನ್ನರಾಯಪಟ್ಟಣ ಸರ್ಕಲ್, ನಂದಿನಿ ಶಾಲೆಯ ಮುಂಭಾಗ, ಕೋಲಾರ ರಸ್ತೆಯ ಶಾದಿ ಮಹಲ್ ಎದುರು, ಜಿ.ಎಂ.ಸರ್ಕಲ್ ಹತ್ತಿರ, ಸುವೀಕ್ಷಾ ಆಸ್ಪತ್ರೆಯ ಮುಂಭಾಗ ಸೇರಿ ಬಹುತೇಕ ಕಡೆಗಳಲ್ಲಿ ಬಿದ್ದಿರುವ ಗುಂಡಿಗಳು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕೆಲವು ಕಡೆಗಳಲ್ಲಿ ಗುಂಡಿಗಳಲ್ಲಿ ಜಲ್ಲಿಕಲ್ಲು ತುಂಬಿ ತಾತ್ಕಾಲಿಕವಾಗಿ ತೇಪೆ ಕೆಲಸ ಮಾಡಿದ್ದರೂ ರಸ್ತೆಗಳಲ್ಲಿ ವಾಹನ ಸಂಚಾರ ಅಪಾಯಕಾರಿಯಾಗಿದೆ.
ಕೆರೆಯಲ್ಲಿ ಇದು ಶಿವಗಂಗೆ ರಸ್ತೆ!: ದಾಬಸ್ ಪೇಟೆ ಹೋಬಳಿ ಶಿವಗಂಗೆ ರಸ್ತೆ ಗುಂಡಿಮಯವಾಗಿದ್ದು, ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಕೆರೆಯ ರೂಪ ಪಡೆದುಕೊಂಡಿದೆ. ರಾಮನಗರ ಸಂಪರ್ಕಿಸುವ ರಾಜ್ಯ ಹೆದ್ದಾರಿ-3ರಲ್ಲಿ ಶಿವಗಂಗೆ ವೃತ್ತದಿಂದ ಕೆಪಿಟಿಸಿಎಲ್ ಆವರಣ ಒಳಗೊಂಡಂತೆ ವೀರಸಾಗರದ ರಸ್ತೆವರೆಗೂ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಬದಿಯಲ್ಲಿ ಅಂಗಡಿಗಳ ನಿರ್ಮಾಣಕ್ಕಾಗಿ ಚರಂಡಿಗಳನ್ನು ಮುಚ್ಚಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ನೀರು ಹರಿಯಲು ಸಾಧ್ಯವಾಗದೆ ರಸ್ತೆಯಲ್ಲಿ ಹರಿಯುತ್ತಿದೆ.
ಬೂದಿಗೆರೆ ಕೆರೆ ಕೋಡಿ: ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ,ಸೋಮತ್ತನಹಳ್ಳಿ, ಬೆಟ್ಟಕೋಟೆ, ಮಂಚಪ್ಪನಹಳ್ಳಿ, ಸುತ್ತಮುತ್ತಲಿನ ಕೆರೆಗಳಿಗೆ ನೀರಿನ ಹರಿವು ಹೆಚ್ಚುತ್ತಿರುವುದ ದೃಶ್ಯ ಕಂಡು ರೈತರು ಸಂತಸಗೊಂಡಿದ್ದಾರೆ. 30 ವರ್ಷದ ಬಳಿಕ ಬೂದಿಗೆರೆ ಕೆರೆ ಮಳೆ ನೀರಿಗೆ ತುಂಬಿ ಕೋಡಿ ಹರಿಯುತ್ತಿರುವುದು ಜನರಲ್ಲಿ ಹರ್ಷ ತಂದಿದೆ. ಮುಂಗಾರು ಮಳೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ಹೋಬಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ಕೆಲವು ಹಳೇಯ ಮನೆಗಳು ಕುಸಿಯುವ ಹಂತ ತಲುಪಿವೆ ಕೆಲವು ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಮನೆಯವರು ಜಾಗರಣೆ ಮಾಡುವಂತಾಯಿತು. ಮನೆಗಳಲ್ಲಿನ ಪಿಠೋಪಕರಣಗಳಿಗೆ ಹಾನಿಯಾಗಿದೆ.
ಆನೇಕಲ್‌ನಲ್ಲಿ ಬಡಾವಣೆಗಳು ಜಲಾವೃತ: ಪುರಸಭೆ ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿದ ನೀರು ಆವಾಂತರ ಸೃಷ್ಟಿಮಾಡಿದ್ದು, ದೇವಾಂಗಪೇಟೆ ನಿವಾಸಿಗಳು ಪರದಾಡುವಂತಾಯಿತು. ವಾರ್ಡ್14ರಲ್ಲಿ ಮನೆಗೋಡೆ ಕುಸಿದು ಬಿದ್ದಿದ್ಧು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ದೇವರಕೊಂಡಪ್ಪ ವೃತ್ತ, ಹೊಸೂರು ಮುಖ್ಯ ರಸ್ತೆ, ಡೈರಿ ಮುಂಭಾಗ, ಶ್ರೀರಾಮ ಮಂದಿರದ ಮುಂಭಾಗದ ರಸ್ತೆ ತಿರುವು ರಸ್ತೆ ಗುಂಡಿಗಳಲ್ಲಿ ತುಂಬಿಹೋಗಿವೆ.ಹೆಬ್ಬಗೋಡಿ ನಗರಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆ ಜಲಾವೃತವಾಗಿದ್ದು, ವಿದ್ಯಾರ್ಥಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದೆ ಪರದಾಡುವಂತಾಯಿತು.
ದೊಡ್ಡಬಳ್ಳಾಪುರದಲ್ಲಿ ಕೊಚ್ಚಿಹೋದ ಸೇತುವೆ: ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ಸಂಪರ್ಕ ಸೇತುವೆ ಮಂಗಳವಾರ ರಾತ್ರಿ ಸುರಿದ ಮಳೆಗೆ ಕೊಚ್ಚಿಹೋಗಿದ್ದು, ಈ ವ್ಯಾಪ್ತಿಯ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಇದರಿಂದಾಗಿ ಗ್ರಾಮಸ್ಥರು, ತೀವ್ರ ತೊಂದರೆ ಎದುರಿಸುವಂತಾಗಿದೆ. ಹೊಸಹಳ್ಳಿ-ಕೊಟ್ಟಿಗೆಮಾಚೇನಹಳ್ಳಿ ನಡುವಿನ ಸೇತುವೆ. 2017ರಲ್ಲಿ ಸುರಿದ ಮಳೆಗೆ ಕೊಚ್ಚಿಹೋಗಿತ್ತು. ಅಂದಿನಿಂದ ಕೊಟ್ಟಿಗೆಮಾಚೇಹಳ್ಳಿ, ಕುಕ್ಕಲಹಳ್ಳಿ, ಬ್ಯಾಡರಹಳ್ಳಿ ಗ್ರಾಮಗಳ ಸಂಪರ್ಕಕ್ಕಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಈಗ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ, ಹಳ್ಳದಲ್ಲಿ ನೀರು ಹರಿಯುತ್ತಿದೆ. ಈ ವ್ಯಾಪ್ತಿಯ ಸುಮಾರು ಎರಡು ಸಾವಿರ ಗ್ರಾಮಸ್ಥರು ಸಂಪರ್ಕ ರಸ್ತೆ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ.