

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಪಾರ ಪ್ರಮಾಣ ಬೆಳೆ ಹಾಗಿಯಾಗಿರುವ ಜತೆಗೆ ರಸ್ತೆಗಳು ಕಿತ್ತು ಬಂದಿವೆ. ಕೆಲವೆಡೆ ಮಂಡಿಯುದ್ದ ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಮೃತ್ಯುಕೂಪಗಳಾಗಿ ರೂಪುಗೊಂಡಿರುವೆ.
ಮುಖ್ಯರಸ್ತೆಗಳಲ್ಲದೆ ಹೆದ್ದಾರಿಗಳಲ್ಲೂ ಗುಂಡಿಗಳು ನಿರ್ಮಾಣವಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿವೆ. ಗುಂಡಿಗಳಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುವ ಪ್ರಕರಣ ಕಂಡುಬರುತ್ತಿವೆ.
ತೇಪೆ ಕೆಲಸಕ್ಕೂ ಮಳೆ ಅಡ್ಡಿ: ವಾರದಿಂದ ಮುಂಜಾನೆಯೇ ಶುರುವಾಗುವ ತುಂತುರು ಮಳೆ ಸಂಜೆ ವೇಳೆಗಾಗಲೇ ಆರ್ಭಟಿಸುತ್ತಿದೆ. ಒಂದು ದಿನವೂ ಬಿಡುವು ಕೊಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಗುಂಡಿ ಮುಚ್ಚುವ ತೇಪೆ ಕೆಲಸಕ್ಕೂ ಅಡ್ಡಿಯಾಗಿದೆ. ಕೆಲವೊಂದು ಕಡೆ ತೇಪೆ ಕೆಲಸ ನಡೆದರೂ ಜೋರು ಮಳೆಯಿಂದ ಕಾಮಗಾರಿ ನೀರುಪಾಲಾಗುತ್ತಿದೆ.
ವಾರದಲ್ಲೇ ದಾಖಲೆ ಮಳೆ: ದಶಕಗಳಲ್ಲೇ ಕಂಡು ಕೇಳರಿಯಂಥ ಧಾರಾಕಾರ ಮಳೆಯಾಗಿದ್ದು, ವಾರವೊಂದರಲ್ಲೇ 636 ಮಿಮೀ ಮಳೆ ಸುರಿದಿದೆ, ಸೆಪ್ಟೆಂಬರ್‌ನಲ್ಲಿ 156 ಮಿಮೀ ವಾಡಿಕೆ ಮಳೆ ಯಾಗಬೇಕು. ಆದರೆ 20 ವರ್ಷದ ಅವಧಿಯಲ್ಲಿ ಒಂದೇ ತಿಂಗಳಲ್ಲಿ ಅತೀ ಹೆಚ್ಚು ಮಳೆ ದಾಖಲೆ ಇದಾಗಿದೆ ಎಂದು ಮಳೆಮಾಪನ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕೂ ತಾಲೂಕುಗಳಲ್ಲಿ ದೇವನಹಳ್ಳಿ ಮೊದಲ ಸ್ಥಾನದಲ್ಲಿದ್ದು, 187 ಮಿಮೀ ಮಳೆ ದಾಖಲಾಗಿದೆ, ನೆಲಮಂಗಲ ಕಡೆಯ ಸ್ಥಾನದಲ್ಲಿದ್ದು 142 ಮಿಮೀ ಮಳೆಯಾಗಿದೆ.
ಸೂಚನಾ ಪಲಕ ಬೇಕು: ರಾಷ್ಟ್ರೀಯ ಹೆದ್ದಾರಿ ಸೇರಿ ಮುಖ್ಯರಸ್ತೆಗಳಲ್ಲಿ ಮಂಡಿಯುದ್ದ ಗುಂಡಿಗಳು ನಿರ್ಮಾಣವಾಗಿ ಮೃತ್ಯುಕೂಪಗಳಾಗಿದ್ದರೂ ಅಧಿಕಾರಿಗಳು ಕನಿಷ್ಠ ಪಕ್ಷ ಈ ಭಾಗದಲ್ಲಿ ಅಪಾಯದ ಸೂಚನೆ ನೀಡುವ ಸೂಚನ ಪಲಕ ಅಥವಾ ಬ್ಯಾರಿಕೇಡ್ ಇಟ್ಟು ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಬೇಕು. ಇಲ್ಲವಾದರೆ ಗುಂಡಿಗಳು ಜನರ ಪ್ರಾಣವನ್ನು ಬಲಿಪಡೆಯಲಿವೆ ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಲೋಕೋಪಯೋಗಿ, ಜಿಪಂ ಸೇರಿ ಯಾವ ಇಲಾಖೆ ವ್ಯಾಪ್ತಿಗೆ ಬರುವ ರಸ್ತೆಗಳು ಎಂಬುದನ್ನು ಪಟ್ಟಿಮಾಡಿ ತಾತ್ಕಾಲಿಕವಾಗಿ ರಿಪೇರಿ ಕಾರ್ಯ ನಡೆಸುವಂತೆ ಸೂಚನೆ ನೀಡಲಾಗಿದೆ, ಜಿಲ್ಲಾಮಟ್ಟದ ರಸ್ತೆಗಳ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಈಗಾಗಲೇ ನಿರ್ದೇಶನ ನೀಡಿದ್ದು ಪ್ರಗತಿಯಲ್ಲಿದೆ, ರಸ್ತೆ ಸಂಪೂರ್ಣ ಹಾಳಾಗಿದ್ದರೆ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪ್ರಕ್ರಿಯೆ ನಡೆಸಲಾಗುವುದು.
| ಆರ್.ಲತಾ ಜಿಲ್ಲಾಧಿಕಾರಿ
ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹೆದ್ದಾರಿಗಳಲ್ಲಿ ರಸ್ತೆ ಗುಂಡಿಗಳು ಬಲಿಗಾಗಿ ಬಾಯ್ತೆರೆದು ಕಾದುಕುಳಿತಿವೆ. ಸ್ಥಳೀಯ ಆಡಳಿತಗಳು ಕೈಕಟ್ಟಿ ಕುಳಿತಿವೆ. ಸಮರೋಪಾದಿಯಲ್ಲಿ ರಸ್ತೆಗುಂಡಿಗಳನ್ನು ಮಚ್ಚುವ ಕೆಲಸ ಮಾಡಬೇಕು ಇಲ್ಲವಾದರೆ ವಾಹನ ಸವಾರರ ಪ್ರಾಣಕ್ಕೆ ಸಂಚಾಕಾರ ಬರಲಿದೆ.
| ಶಿವಕುಮಾರ್ ಸ್ಥಳೀಯ ಹೊಸಕೋಟೆ