ಹಳ್ಳಿಗಳು ಸಮೃದ್ಧವಾದರೆ ದೇಶಾಭಿವೃದ್ಧಿ: ಶಾಸಕ ಶ್ರೀನಿವಾಸಮೂರ್ತಿ ಅಭಿಮತ

2
ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ಗುರುವಾರ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಚಾಲನೆ ನೀಡಿದರು. ಜಿಡಿಎಸ್ ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಮುಖಂಡ ವೈ.ಟಿ.ನಾಗರಾಜು, ಬಿ.ಎಂ.ಗೌಡ, ಯಶು, ಮಂಜುನಾಥ್, ಶಿವಕುಮಾರ್ ಇದ್ದರು.
Published on

ನೆಲಮಂಗಲ: ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ತಾಲೂಕಿನ ಬೂದಿಹಾಲ್ ಗ್ರಾಪಂನ ತೊಣಚಿನಕುಪ್ಪೆ ಗ್ರಾಮದ ಭುವನೇಶ್ವರಿ ಬಡಾವಣೆಯಲ್ಲಿ ಗುರುವಾರ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
10 ವರ್ಷದಿಂದ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ. ಬಹುದಿನ ಬೇಡಿಕೆಯಾಗಿದ್ದ ತೊಣಚಿನಕುಪ್ಪೆಯ ಭುವನೇಶ್ವರಿ ಬಡಾವಣೆ, ಟಿ.ಬೇಗೂರು ಮತ್ತು ಮಾರೇಹಳ್ಳಿ ಗ್ರಾಮದಲ್ಲಿ 1.5ಕೋಟಿ ರೂ.ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.


ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ: ವರ್ಷದ ಹಿಂದೆ ಶಾಸಕರ ಅನುದಾನದಲ್ಲಿ 50 ಲಕ್ಷ ರೂ. ಅನುದಾನವನ್ನು ತಾಲೂಕಿನ 35 ಶಾಲೆಗಳ ಅಭಿವೃದ್ಧಿಗೆ ನೀಡಿದ್ದೇನೆ. ಕೆಲ ಕಂಪನಿಗಳ ಸಿಎಸ್‌ಆರ್ ಅನುದಾನವನ್ನೂ ಸರ್ಕಾರಿ ಶಾಲೆಗಳ ಸೌಕರ್ಯಕ್ಕೆ ಮೀಸಲಿರಿಸಲಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿನ ಸಿಎಸ್‌ಆರ್ ಅನುದಾನವನ್ನು ತವರು ಜಿಲ್ಲೆ ಅಭಿವೃದ್ಧಿಗೆ ಮೀಸಲಿರಿಸಿರುವುದು ಬೇಸರದ ಸಂಗತಿ ಎಂದು ಶಾಸಕರು ಅಸಮಾಧಾನ ವ್ಯಕ್ತ ಪಡಿಸಿದರು.


ಎತ್ತಿನ ಹೊಳೆ ಯೋಜನೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ನೀರು ಪೂರೈಕೆ ಮಾಡಬೇಕು. ನಗರದಲ್ಲಿ ಯುಜಿಡಿ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಖ್ಯಮಂತ್ರಿಗಳು ನಿರಾಕರಿಸಿದ್ದಾರೆ. ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಗರದ ಜನರಿಗೆ ಅನುಕೂಲವಾಗಲು ಯುಜಿಡಿ ನಿರ್ಮಾಣಕ್ಕೆ ಆದೇಶ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಕೇಂದ್ರ ಘೋಷಣೆಗೆ ವಿರೋಧ: ನಾಡಪ್ರಭು ಕೆಂಪೇಗೌಡರು ನಿರ್ಮಾಣ ಮಾಡಿದ್ದ ಬೆಂಗಳೂರು ಹೆಸರಿನಲ್ಲಿರುವ ಗ್ರಾಮಾಂತರ ಜಿಲ್ಲೆಗೆ ಜಿಲ್ಲಾ ಕೇಂದ್ರವಾಗಿ ಗ್ರಾಮಾಂತರ ಜಿಲ್ಲೆಯೇ ಇರಲಿ. ಒಂದು ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವಾಗಿ ಮಾಡುವುದು ಸೂಕ್ತವಲ್ಲ. ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಲು ಮುಂದಾಗಿರುವುದಕ್ಕೆ ವಿರೋಧವಿದೆ ಎಂದು ಶಾಸಕರು ತಿಳಿಸಿದರು.


ತಾಲೂಕು ಜಿಡಿಎಸ್ ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ತಾಪಂ ಸದಸ್ಯ ಬಿ.ಕೆ.ತಿಮ್ಮರಾಜು, ಗ್ರಾಪಂ ಸದಸ್ಯ ಟಿ.ಎಸ್.ಮಂಜುನಾಥ್, ಟಿ.ಕರಿವರದಯ್ಯ, ಜಯರಾಮ್, ಬೊಮ್ಮಹಳ್ಳಿನಾಗರಾಜು, ಬೂದಿಹಾಲ್‌ಮಂಜುನಾಥ್, ವೈ.ಟಿ.ಆಂಜಿನಪ್ಪ, ಮಾಜಿ ಸದಸ್ಯ ಮಂಜುನಾಥ್‌ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net