

ಬೆಂ.ಗ್ರಾಮಾಂತರ/ಹೊಸಕೋಟೆ: ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ, ಜಿಲ್ಲೆಯಾದ್ಯಂತ ವಿನಾಯಕನ ಆರಾಧನೆಗೆ ಭರ್ಜರಿ ಸಿದ್ಧತೆ ನಡೆದಿದೆ, ಸಾರ್ವಜನಿಕ ಗಣೇಶೋತ್ಸವಕ್ಕೆ ವಿವಿಧ ಸಂಘಟನೆಗಳು ತಯಾರಿ ನಡೆಸಿವೆ. ಕಳೆದೆರಡು ವರ್ಷದಿಂದ ಕರೊನಾದಿಂದ ಹಬ್ಬಕ್ಕೆ ಕವಿದಿದ್ದ ಮಂಕು ದೂರವಾಗಿದೆ. ಈ ಬಾರಿ ಗೌರಿಗಣೇಶನನ್ನು ಭರ್ಜರಿಯಾಗಿ ಸ್ವಾಗತಿಸಲು ಜಿಲ್ಲೆಯ ಜನ ಉತ್ಸುಕರಾಗಿದ್ದಾರೆ.
ಶ್ರಾವಣ ಮಾಸದ ಸಾಲುಸಾಲು ಹಬ್ಬಗಳ ಹಿಂದೆಯೇ ಆಗಮಿಸುತ್ತಿರುವ ಗೌರಿಗಣೇಶ ಹಬ್ಬವನ್ನು ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ಭರ್ಜರಿಯಾಗಿಯೇ ಆಚರಿಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ. ಈ ಬಾರಿಯೂ ಇಂಥ ಸಂಭ್ರಮಕ್ಕೆ ಗಣೇಶ ಹಬ್ಬ ತೆರೆದುಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಹಬ್ಬದ ಸಂಭ್ರಮ ಮನೆ ಮಾಡಿದೆ.
ತರಹೇವಾರಿ ಗಣಪನೊಂದಿಗೆ ಅಪ್ಪುಗಣಪ: ಎಂದಿನಂತೆ ಈ ಬಾರಿಯೂ ತರಹೇವಾರಿ ಗಣಪ ಮೂರ್ತಿಗಳು ಮಾರುಕಟ್ಟೆಗಳಲ್ಲಿ ಭಕ್ತರನ್ನು ಎದುರುಗೊಳ್ಳುತ್ತಿವೆ. ಮುಖ್ಯವಾಗಿ ಪರಿಸರಸ್ನೇಹಿ ಮಣ್ಣಿನ ಗಣಪಗಳು ಹೆಚ್ಚೆಚ್ಚು ಕಂಡುಬರುತ್ತಿವೆ. ರಾಸಾಯನಿಕ ಬಣ್ಣಲೇಪಿತ ಮೂರ್ತಿಗಳಿಗಿಂತ ಮಣ್ಣಿನ ಬಣ್ಣರಹಿತ ಮೂರ್ತಿಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಅರ್ಧ ಅಡಿಯಿಂದ ಹಿಡಿದು ಆರೇಳು ಅಡಿವರೆಗಿನ ಗಣಪ ಮೂರ್ತಿಗಳು ಈಗಾಗಲೇ ಅಂಗಡಿಗಳ ಸಾಲಿನಲ್ಲಿ ರಾರಾಜಿಸುತ್ತಿವೆ. ಈ ಬಾರಿ ವಿಶೇಷವಾಗಿ ನಟ ಪುನೀತ್‌ರಾಜ್‌ಕುಮಾರ್ ಪುತ್ಥಳಿಯೊಂದಿಗಿರುವ ಗಣಪ ಮೂರ್ತಿಗಳು ಆಕರ್ಷಣೆಯಾಗಿದ್ದು, ಪುನೀತ್ ಅಭಿಮಾನಿಗಳು ಇಂಥ ಗಣಪನ ಖರೀದಿಗೆ ಮುಗಿಬೀಳುತ್ತಿದ್ದು ಡಿಮ್ಯಾಂಡ್ ಸೃಷ್ಟಿಯಾಗಿದೆ. ಪುನೀತ್ ಕೆನ್ನೆ ಸವರುತ್ತಿರುವ ಗಣಪ, ಪುನಿತ್ ಅವರನ್ನು ಆಶೀರ್ವದಿಸುತ್ತಿರುವ ಗಣಪ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಉಳಿದಂತೆ ಅಶ್ವಾರೂಢ ಗಣಪ, ಪರಿಸರ ಸಂರಕ್ಷಕ ಗಣಪ, ಸಿಂಹಾಸನದಲ್ಲಿ ಕುಳಿತ ಗಣಪ ಹೀಗೆ ತರಹೇವಾರಿ ರೂಪದಲ್ಲಿ ಗಣಪಮೂರ್ತಿಗಳು ಮಾರುಕಟ್ಟೆಗಳಿಗೆ ಬಂದಿವೆ.
ಪರಿಸರ ಸ್ನೇಹಿ ಆರಾಧನೆಗೆ ಮನವಿ: ಈ ಬಾರಿ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಗಿದ್ದು, ಎಲ್ಲ ಕೆರೆಕಟ್ಟೆಗಳಲ್ಲಿ ಜಲರಾಶಿ ಕಂಡುಬರುತ್ತಿದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಈಗಾಗಲೇ ಕೆರೆಕಟ್ಟೆಗಳನ್ನು ಗುರುತಿಸಲಾಗುತ್ತಿದ್ದು, ಸ್ಥಳೀಯ ಆಡಳಿತ ಪರಿಶೀಲನೆ ನಡೆಸಿ ಮೂರ್ತಿಗಳ ವಿಸರ್ಜನೆಗೆ ಪರವಾನಗಿ ನೀಡಲು ಕೆಲವೊಂದು ನಿಯಮಗಳನ್ನು ರೂಪಿಸುತ್ತಿದೆ. ಏತನ್ಮಧ್ಯೆ ಬಣ್ಣರಹಿತ ಗಣೇಶ ಮೂರ್ತಿಗಳ ಆರಾಧನೆ ಮಾಡುವಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆ್ ಪ್ಯಾರಿಸ್‌ನಿಂದ ತಯಾರಿಸಿದ ಹಾಗೂ ರಾಸಾಯನಿಕ ಲೇಪಿತ ಬಣ್ಣದ ಮೂರ್ತಿಗಳನ್ನು ಖರೀದಿಸದಂತೆ ಮನವಿ ಮಾಡಿದೆ. ಈ ಬಗ್ಗೆ ಕೆಲವೊಂದು ಕಡೆ ಸ್ಥಳೀಯ ಆಡಳಿತಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಪ್ಲಾಸ್ಟರ್ ಆ್ ಪ್ಯಾರೀಸ್(ಪಿಒಪಿ) ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಬಣ್ಣರಹಿತ ಮಣ್ಣಿನ ಗಣಪನ ಆರಾಧನೆ ಮೂಲಕ ಪರಿಸರಸ್ನೇಹಿ ಹಬ್ಬ ಆಚರಿಸಬೇಕು. ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡಬಾರದು. ಗಣೇಶೋತ್ಸವದ ನಿಯಮಗಳನ್ನು ಪಾಲಿಸುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಬೇಕು.
| ಆರ್.ಲತಾ ಜಿಲ್ಲಾಧಿಕಾರಿ
ಮರಗೆಣಸಿನ ಪುಡಿಯಿಂದ ಗೌರಿಗಣೇಶ ಮೂರ್ತಿಗಳನ್ನು ತಯಾರಿಸಿದ್ದೇವೆ. ಈ ಮೂರ್ತಿಗಳು ಪರಿಸರ ಸ್ನೇಹಿಯಾಗಿದ್ದು, ನೀರಿನಲ್ಲಿ ವಿಸರ್ಜನೆ ಬಳಿಕ ಜಲಚರಗಳಿಗೆ ಆಹಾರವಾಗುತ್ತದೆ. ಮಣ್ಣಿನ ಗಣಪ ಮೂರ್ತಿಗಳ ಜತೆಗೆ ಮರಗೆಣಸಿನ ಪುಡಿಯಿಂದ ತಯಾರು ಮಾಡಿದ್ದೇವೆ. ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ವ್ಯಾಪಾರವೂ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗಿದೆ.
| ಆದಿನಾರಾಯಣ ಗಣಪಮೂರ್ತಿ ತಯಾರಕ ದೊಡ್ಡಬಳ್ಳಾುರ