ಗಣೇಶೋತ್ಸವಕ್ಕೆ ಮಳೆರಾಯನ ಅಡ್ಡಿ: ವ್ಯಾಪಾರ ವಹಿವಾಟಿಗೆ ತೊಡಕು, ಗಣಪ ಮೂರ್ತಿ ಮಾರಾಟಗಾರರ ಸಂಕಷ್ಟ

2.
ಹೊಸಕೋಟೆಯಲ್ಲಿ ಗ್ರಾಹಕರ ಆಗಮನಕ್ಕೆ ಕಾದು ಕುಳಿತಿರುವ ಗಣೇಶ ಮೂರ್ತಿಗಳು.
Published on

ಬೆಂಗಳೂರು ಗ್ರಾಮಾಂತರ: ಕಳೆದೆರಡು ವರ್ಷದಿಂದ ಕರೊನಾ ಕಾರಣದಿಂದ ಮಂಕುಕವಿದಿದ್ದ ಗಣೇಶೋತ್ಸವ ಆಚರಣೆಗೆ ಈ ಬಾರಿ ಮಳೆರಾಯನ ಅಡ್ಡಿ ಆತಂಕ ಎದುರಾಗಿದೆ. ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಸಾರ್ವಜನಿಕ ಗಣೇಶೋತ್ಸವ ಆಯೋಜಕರನ್ನು ಚಿಂತೆಗೀಡು ಮಾಡಿದೆ.

ಗಣೇಶ ಚತುರ್ಥಿಗೆ ತಿಂಗಳು ಬಾಕಿ ಇರುವಂತೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಭರದ ಸಿದ್ಧತೆ ನಡೆಸಿರುವ ಆಯೋಜಕರು ಮಳೆರಾಯನ ಅಬ್ಬರಕ್ಕೆ ಸುಸ್ತುಹೊಡೆದಿದ್ದಾರೆ. ಬಿರುಸಾದ ಮಳೆಯೊಂದಿಗೆ ಜಡಿ ಮಳೆ ಸುರಿಯುತ್ತಿದ್ದು, ಗಣೇಶೋತ್ಸವ ಸಂಕಷ್ಟ ಎದುರಿಸುವಂತಾಗಿದೆ.

ಮಾರುಕಟ್ಟೆಗಳಲ್ಲಿ ವಹಿವಾಟು ಡಲ್: ಗಣೇಶ ಚತುರ್ಥಿಗೆ ಕ್ಷಣಗಣನೆ ಆರಂಭವಾಗಿದೆ, ನಗರ ಪಟ್ಟಣ ಪ್ರದೇಶಗಳಲ್ಲಿ ಲೋಡ್‌ಗಟ್ಟಲೆ ಬಾಳೆಕಂಬ, ಕುಂಬಳಕಾಯಿ, ಗರಿಕೆ, ಮಾವಿನ ಸೊಪ್ಪು ಬಂದು ಬಿದ್ದಿವೆ. ಹೂ ಮಾರುಕಟ್ಟೆಗಳಲ್ಲಿ ತರಹೇವಾರಿ ಹೂಮಾಲೆಗಳು ಸಿದ್ಧಗೊಂಡು ಗ್ರಾಹಕರ ಸ್ವಾಗತಕ್ಕೆ ಕಾದಿವೆ. ಆದರೆ ಮಳೆರಾಯನ ಆರ್ಭಟದಿಂದ ಗ್ರಾಹಕರು ಮಾರುಕಟ್ಟೆಗಳತ್ತ ಸುಳಿಯುತ್ತಿಲ್ಲ. ದಾಸ್ತಾನು ಮಾಡಿರುವ ಬಾಳೆಕಂಬ, ಮಾವಿನಸೊಪ್ಪು ಮತ್ತಿತರ ವಸ್ತುಗಳು ಮಳೆಗೆ ಹಾನಿಯಾಗುತ್ತಿವೆ. ಅವುಗಳನ್ನು ಸಂರಕ್ಷಣೆ ಮಾಡುವುದೇ ದೊಡ್ಡ ಸಾಹಸವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಯೇ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ವ್ಯಾಪಾರ ವಹಿವಾಟಿಗೆ ದೊಡ್ಡಪೆಟ್ಟು ಬಿದ್ದಂತಾಗಿದೆ.

ಗಣಪ ವ್ಯಾಪಾರಿಗಳಿಗೂ ಸಂಕಷ್ಟ: ಕಳೆದ ಆರೇಳು ತಿಂಗಳಿಂದಲೇ ತಹರೇವಾರಿ ಗಣಪ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದ ಗಣಪನ ತಯಾರಕರು ಹಾಗೂ ದೂರದ ಊರುಗಳಿಂದ ಮೂರ್ತಿಗಳನ್ನು ಖರೀದಿಸಿ ತಂದು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ವ್ಯಾಪಾರಿಗಳಿಗೂ ಮಳೆರಾಯ ಸಂಕಷ್ಟ ತಂದಿದ್ದಾನೆ. ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಗಣಪ ಮೂರ್ತಿಗಳ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು ಮಳೆಯಿಂದ ಮೂರ್ತಿಗಳನ್ನು ರಕ್ಷಿಸಿಕೊಳ್ಳುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶಗಳಲ್ಲಿ ಚರಂಡಿಗಳು ಕಟ್ಟಿಕೊಂಡು ನೀರು ಉಕ್ಕಿ ರಸ್ತೆಯಲ್ಲಿಯೇ ಹರಿಯುತ್ತಿರುವುದರಿಂದ ಗಣೇಶನ ಮೂರ್ತಿಗಳನ್ನಿಟ್ಟರುವ ಶೆಡ್‌ಗಳು ಜಲಾವೃತವಾಗಿ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ.

ಕರೆಂಟ್ ಕಟ್: ಗಣೇಶೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸುವ ವಿದ್ಯುತ್ ದೀಪಾಲಂಕಾರಕ್ಕೂ ಮಳೆರಾಯ ಅಡ್ಡಿಯಾಗಿದ್ದಾನೆ. ಸಾರ್ವಜನಿಕ ಗಣೇಶೋತ್ಸವಕ್ಕೆ ರಸ್ತೆಯದ್ದಕ್ಕೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಗೆ ತಯಾರಿ ನಡೆದಿದೆ. ಆದರೆ ಗಾಳಿ ಮಳೆಯಿಂದಾಗಿ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿಗೊಳ್ಳುತ್ತಿದೆ. ಬೆಸ್ಕಾಂ ಕೂಡ ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸುತ್ತಿದೆ. ಕಳೆದೆರಡು ದಿನಗಳಿಂದ ನಗರ ಪಟ್ಟಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೂ ಅಡಚಣೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಡೀ ರಾತ್ರಿ ವಿದ್ಯುತ್ ಕಡಿತಗೊಳ್ಳುವುದು ಸಾಮಾನ್ಯ ಎನ್ನುವಂತಾಗಿದೆ. ಇದರಿಂದ ಗಣೇಶೋತ್ಸವದ ಬೆಳಕಿನ ಅಲಂಕಾರಕ್ಕೆ ಮಳೆರಾಯನೇ ಅಡಚಣೆಯಾಗಿದ್ದಾನೆ.


ಗನಕ್ಕೇರಲಿದೆ ಬೆಲೆ: ವರಮಹಾಲಕ್ಷ್ಮೀ ಹಬ್ಬದ ಬಳಿಕ ಹೂಹಣ್ಣು ತರಕಾರಿಗಳ ಬೆಲೆ ಇಳಿಮುಖವಾಗಿತ್ತು. ಆದರೆ ಕಳೆದ ಮೂರ‌್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೂ, ಹಣ್ಣು, ತರಕಾರಿಗಳ ಬೆಲೆ ಗಗನಮುಖಿಯಾಗುವ ಸಾಧ್ಯತೆ ಹೆಚ್ಚಿದೆ. ಮಾರುಕಟ್ಟೆಗಳಿಗೆ ಹೂ ಬರುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ ಎಂಬ ಮಾತು ಕೇಳಿಬರುತ್ತಿದೆ.

ಕಳೆದೆರಡು ವರ್ಷದಿಂದ ಕರೊನಾ ಕಾರಣದಿಂದ ವ್ಯಾಪಾರ ವಹಿವಾಟುಗಳೆಲ್ಲ ಬಂದ್ ಆಗಿದ್ದವು. ಶ್ರಾವಣ ಮಾಸ ಆರಂಭವಾದ ಬಳಿಕ ಮತ್ತೆ ಪೂಜಾಸಾಮಗ್ರಿ ಹೂ, ಹಣ್ಣು, ತರಕಾರಿ ವಹಿವಾಟಿನಲ್ಲಿ ಸುಧಾರಣೆ ಕಂಡುಬಂದಿತ್ತು. ಆದರೆ ಕಳೆದ ಮೂರು ದಿನಗಳಿಂದ ಸುರಿಯತ್ತಿರುವ ಮಳೆಯಿಂದಾಗಿ ಮಾರುಕಟ್ಟೆಗಳತ್ತ ಗ್ರಾಹಕರು ಸುಳಿಯುತ್ತಿಲ್ಲ. ಹಬ್ಬದ ಮುನ್ನಾ ದಿನ ಹೆಚ್ಚಿನ ವ್ಯಾಪಾರದ ನಿರೀಕ್ಷೆ ಇತ್ತು. ಮಳೆರಾಯ ಏನು ಮಾಡುವನೋ ನೋಡಬೇಕು.
| ಸುನಂದಮ್ಮ ಹೂ ವ್ಯಾಪಾರಿ ದೊಡ್ಡಬಳ್ಳಾಪುರ



ಎರಡ್ಮೂರು ದಿನದ ಮುನ್ನವೇ ಗಣೇಶ ಮೂರ್ತಿಗಳ ಖರೀದಿ ಜೋರಾಗಿ ನಡೆಯುತ್ತಿತ್ತು. ಆದರೆ ಇನ್ನೊಂದೆ ದಿನ ಬಾಕಿ ಇದ್ದರೂ ನಿರೀಕ್ಷೆಯಷ್ಟು ಗ್ರಾಹಕರು ಮಾರುಕಟ್ಟೆಗಳತ್ತ ಬರುತ್ತಿಲ್ಲ. ಸಾರ್ವಜನಿಕ ಗಣೇಶೋತ್ಸವಕ್ಕಾಗಿ ದೊಡ್ಡ ಮೂರ್ತಿಗಳ ಮುಂಗಡ ಬುಕ್ಕಿಂಗ್ ಮಾಡಿರುವವರು ಹಬ್ಬದ ಆಚರಣೆ ಮುಂದೂಡುವ ಬಗ್ಗೆ ಮಾತನಾಡುತ್ತಿದ್ದಾರೆ. ಮಣ್ಣಿನ ಮೂರ್ತಿಗಳನ್ನು ಕಾಪಾಡುವುದೇ ಕಷ್ಟವಾಗಿದೆ.
| ದಿನೇಶ್ ಗಣೇಶಮೂರ್ತಿ ವ್ಯಾಪಾರಿ, ದೇವನಹಳ್ಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net