ಸಕಾಲ ಸೇವೆಯಲ್ಲಿ ಜಿಲ್ಲೆ ಪ್ರಥಮ: ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಆರ್.ಲತಾ

DC Photo
Published on

ಬೆಂಗಳೂರು ಗ್ರಾಮಾಂತರ: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ 31 ಜಿಲ್ಲೆಗಳ ಪೈಕಿ ಗ್ರಾಮಾಂತರ ಜಿಲ್ಲೆ ಮೊದಲ ಬಾರಿಗೆ ಪ್ರಥಮ ಶ್ರೇಯಾಂಕ ಪಡೆದಿದೆ.


ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ ಅಹವಾಲು ಅರ್ಜಿಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯಡಿ ಸೆ.2022ರ ತಿಂಗಳ ಪ್ರಗತಿಯ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.


2022ರ ಸೆಪ್ಟೆಂಬರ್‌ನಲ್ಲಿ ಸಕಾಲ ಯೋಜನೆಯಡಿ 70,476 ಅರ್ಜಿ ಸ್ವೀಕರಿಸಿ, ಈ ಪೈಕಿ 69,036 ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇ ಮಾಡಲಾಗಿದೆ. 2,909 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದೆ ತಿರಸ್ಕೃತಗೊಂಡಿವೆ.


29 ಅರ್ಜಿ ವಿಲೇ ಬಾಕಿಯಿದೆ: ಅರ್ಜಿಗಳ ವಿಲೇವಾರಿ ಕುರಿತಂತೆ ಸರ್ಕಾರ ಪ್ರತಿ ತಿಂಗಳು ಶ್ರೇಯಾಂಕ ಪಟ್ಟಿ ಪ್ರಕಟಿಸುತ್ತದೆ. ಜಿಲ್ಲೆಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಕಾಲ ಮಿತಿಯಲ್ಲಿ ಕಡತ ವಿಲೇವಾರಿಯಾಗಬೇಕು ಹಾಗೂ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಸಾರ್ವಜನಿಕರಿಗೆ ನಿಗದಿತ ಅವಧಿಯೊಳಗೆ ಸರ್ಕಾರದ ಸೇವೆಗಳು ಲಭ್ಯವಾಗಲಿವೆ.

ಮೊದಲ ಬಾರಿ ಶ್ರೇಯಾಂಕ: ಸಕಾಲ ಸೇವೆಗಳ ಅಧಿನಿಯಮದಡಿ ಸಕಾಲ ಯೋಜನೆ ಆರಂಭವಾದ ದಿನದಿಂದ ಈ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ತಿಂಗಳ ಪೈಕಿ ಜಿಲ್ಲೆ ರಾಜ್ಯದಲ್ಲಿಯೇ ಈ ಬಾರಿ ಮೊದಲ ಸ್ಥಾನ ಪಡೆದಿದೆ. ಈ ಹಿಂದೆ ಎರಡು ಬಾರಿ ದ್ವಿತೀಯ ಹಾಗೂ ಮೂರು ಬಾರಿ ತೃತೀಯ ಸ್ಥಾನ ಪಡೆದಿತ್ತು.

ಚಿಕ್ಕಬಳ್ಳಾಪುರದಲ್ಲೂ ಸಾಧನೆ: 3 ತಿಂಗಳ ಹಿಂದೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಸಕಾಲ ಯೋಜನೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ. ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಲತಾ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದ ಪ್ರಶಂಸಾ ಪತ್ರ ಪಡೆದಿದ್ದರು.

ಜಿಲ್ಲಾಧಿಕಾರಿ ಹರ್ಷ: ಇಂದು ನಾಳೆ ಇನ್ನಿಲ್ಲ. ಹೇಳಿದ ಸಮಯ ತಪ್ಪೊಲ್ಲ ಎಂಬ ಯೋಜನೆಯ ಧ್ಯೇಯವಾಕ್ಯದಂತೆ ಜಿಲ್ಲಾಡಳಿತ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸರ್ಕಾರಿ ಯೋಜನೆಗಳ ಅನುಷ್ಠಾನ ಹಾಗೂ ಸೇವೆ ನೀಡುವಲ್ಲಿ ಸಹಕಾರಿಯಾಗಿದೆ. ಈ ಸಾಧನೆಗೆ ಸಹಕಾರ ನೀಡಿದ ಎಲ್ಲಾ ಇಲಾಖೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಹೀಗೆಯೇ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಪ್ರಥಮ ಸ್ಥಾನ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net