

ಬೆಂ.ಗ್ರಾಮಾಂತರ/ತ್ಯಾಮಗೊಂಡ್ಲು: ಸರ್ಕಾರದ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಯಾದ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ‘ ಕಾರ್ಯಕ್ರಮಕ್ಕೆ ಸರ್ಜರಿ ಮಾಡಿರುವ ಜಿಲ್ಲಾಧಿಕಾರಿ ಆರ್.ಲತಾ ಹೊಸ ಹೆಜ್ಜೆಯೊಂದಿಗೆ ನಡಿಗೆ ಮುಂದುವರಿಸಿದ್ದಾರೆ.
ತ್ಯಾಮಗೊಂಡ್ಲು ಹೋಬಳಿ ಮಣ್ಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎತ್ತಿನಗಾಡಿ ಮೆರವಣಿಗೆ, ವೇದಿಕೆಯಲ್ಲಿ ಉದ್ದುದ್ದ ಭಾಷಣ, ಗಣ್ಯರಿಗೆ ಸ್ವಾಗತ ಕೋರಲು ಕಾಲಹರಣ, ಸ್ಟಾಲ್‌ಗಳ ಉದ್ಘಾಟನೆಗೆ ತೆಗೆದುಕೊಳ್ಳುತ್ತಿದ್ದ ಹೆಚ್ಚುವರಿ ಸಮಯ, ಗಣ್ಯರಿಗೆ ಹಾರತುರಾಯಿಗಳ ಗೋಜಲು ಗದ್ದಲ ಮತ್ತಿತರ ಅನವಶ್ಯಕ ವಿಷಯಗಳಿಗೆ ಬ್ರೇಕ್ ಹಾಕುವ ಮೂಲಕ ಸರ್ಕಾರದ ಉದ್ದೇಶ ಸಾರ್ಥಕಪಡಿಸುವ ಕೆಲಸ ನಡೆಸಿದ್ದಾರೆ.
ಕೆಲವೊಂದು ಕಾಲಹರಣ ಕಾರ್ಯಕ್ರಮದಿಂದ ಹಳ್ಳಹಿಡಿಯುತ್ತಿದೆ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಿದ್ದಾರೆ.
ಚುಟುಕಾಗಿ ಮುಗಿದ ವೇದಿಕೆ ಕಾರ್ಯಕ್ರಮ: ವೇದಿಕೆ ಕಾರ್ಯಕ್ರಮವನ್ನು ಚುಟುಕಾಗಿ ಮುಗಿಸಿ ನೇರವಾಗಿ ಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಮೂಲಕ ಜಿಲ್ಲಾಧಿಕಾರಿ ನಡೆಗೆ ಚುರುಕುಗೊಳಿಸಿದರು. ಬಳಿಕ ಹಾಸ್ಟೆಲ್‌ಗೆ ತೆರಳಿ ಪರಿಶೀಲಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಸ್ಥಳದಲ್ಲೇ ಅಧಿಕಾರಿಗಳಿಂದ ಗ್ರಾಪಂ ವ್ಯಾಪ್ತಿಯ ಮತ್ತಷ್ಟು ಮಾಹಿತಿ ಪಡೆದರು. ಗ್ರಾಮದಲ್ಲಿ ಸಂಚಾರ ನಡೆಸಿ ಸಾರ್ವಜನಿಕರಿಂದ ಮನವಿ ಆಲಿಸಿದರು.
ಶಿಕ್ಷಣಕ್ಕೆ ಆದ್ಯತೆ: ರಾಜ್ಯ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದ 9 ಸಾವಿರ ಸರ್ಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಪ. ಜಾತಿ ಮತ್ತು ಪ.ಪಂಗಡದ ಬಡವರಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ಸರ್ಕಾರ ನೀಡುತ್ತಿದೆ. ಭೂಮಿ ಹೊಂದಿರುವ ಪ್ರತಿ ರೈತನಿಗೆ ವಾರ್ಷಿಕವಾಗಿ ಕೇಂದ್ರ ಸರ್ಕಾರ 6 ಸಾವಿರ ರೂ. ಮತ್ತು ರಾಜ್ಯ ಸರ್ಕಾರ 4 ಸಾವಿರ ಸೇರಿ 10 ಸಾವಿರ ರೂ. ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ ಎಂದರು.
ಪೋಡಿ ಸಮಸ್ಯೆ ಬಗೆಹರಿಸಬೇಕು: ಕಾರ್ಯಕ್ರಮದ ಉದ್ದೇಶ ಈಡೇರಲು ಗ್ರಾಮಸ್ಥರು ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಬೇಕು ಎಂದರು. ಇದರಿಂದ ಗ್ರಾಮಗಳ ಮೂಲ ಸೌಕರ್ಯಗಳ ಕೊರತೆ ಬಗ್ಗೆ ತಿಳಿಯುತ್ತದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು. ಪ್ರತಿ ಗ್ರಾಮ ಪಂಚಾಯಿತಿಗೂ ಆಟದ ಮೈದಾನ ಇರುವಂತೆ ಅಧಿಕಾರಿಗಳು ಯೋಜನೆ ರೂಪಿಸಬೇಕು. ಮುಖ್ಯವಾಗಿ ರೈತರು ಪೋಡಿ ಸಮಸ್ಯೆ ಎದುರಿಸುತ್ತಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಗ್ರಾಮಗಳಿಗೆ ಸ್ಮಶಾನದ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸ್ಥಳದಲ್ಲೇ ಪರಿಹಾರ: ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಪಹಣಿ ಕಾಲಂ 3 ಮತ್ತು 9ಕ್ಕೆ ವ್ಯತ್ಯಾಸ ಸರಿಪಡಿಸುವ ಬಗ್ಗೆ ಆದೇಶಗಳನ್ನು ಹೊರಡಿಸಲಾಗುವುದು. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರನ್ನು ಗುರುತಿಸಿ ಪೌತಿ ಖಾತೆ ಬದಲಾವಣೆ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ 569 ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳು, ಆಯುಷ್ಮಾನ್ ಕಾರ್ಡ್ 5052 , ಕೃಷಿ ಇಲಾಖೆ 114 ಫಲಾನುಭವಿಗಳು, ಸಮಾಜ ಕಲ್ಯಾಣ ಇಲಾಖೆಯಿಂದ 34 ಫಲಾನುಭವಿಗಳು, ತೋಟಗಾರಿಕೆ ಇಲಾಖೆಯಿಂದ 130 ಜನಕ್ಕೆ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.