

ತೂಬಗೆರೆ: ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಅಧಿಕಾರಿಗಳ ತಂಡ ಭಾನುವಾರ ಬೆಳಗ್ಗೆ ದಲಿತ ಕಾಲನಿಗಳಿಗೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸುವುದರೊಂದಿಗೆ ಮೇಲಿನಜೂಗಾನಹಳ್ಳಿಯಲ್ಲಿ ಶನಿವಾರ ಚಾಲನೆಗೊಂಡ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಸಮಾರೋಪಗೊಂಡಿತು.
ಶನಿವಾರ ವಿವಿಧ ಇಲಾಖೆಗಳ ಮಳಿಗೆ ಉದ್ಘಾಟನೆ, ಸಚಿವ ಡಾ.ಕೆ.ಸುಧಾಕರ್ ಹಾಗೂ ಅಧಿಕಾರಿಗಳ ತಂಡದ ವೇದಿಕೆ ಕಾರ್ಯಕ್ರಮ, ರಾತ್ರಿ ದೇಗುಲದ ಆವರಣದಲ್ಲಿ ಗ್ರಾಮಸಭೆ ಬಳಿಕ ಬಚ್ಚಲಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಧಿಕಾರಿಗಳ ತಂಡ ವಾಸ್ತವ್ಯ ಹೂಡಿತ್ತು.
ಮನವಿಗಳ ಮಹಾಪೂರ: ಗೌರಿಬಿದನೂರು ಕಡೆಗೆ ಹೋಗಲು ಆಗುತ್ತಿಲ್ಲ. ನಮಗೆ ಶೀಘ್ರ ಸಂಪರ್ಕ ಸೇತುವೆ ನಿರ್ಮಾಣ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಕೆಲ ರೈತರು, ಗೋಮಾಳ ಮತ್ತಿತರ ಒತ್ತುವರಿಯಾಗಿರುವ ತೆರವು ಮಾಡಿಸಿಕೊಡಿ ಎಂದು ಬೇಡಿಕೆ ಇಟ್ಟರು. ದಿನನಿತ್ಯ ವಿದ್ಯಾರ್ಥಿಗಳು 5 ಕಿಮೀ ಕಾಲ್ನಡಿಗೆಯಲ್ಲಿ ಕಾಲೇಜಿಗೆ ಹೋಗಬೇಕಾಗಿದೆ, ಆದ್ದರಿಂದ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಚರಂಡಿ ಸರಿಪಡಿಸಿ, ನೀರಿನ ಘಟಕ ನಿರ್ಮಾಣ ಮಾಡಿ, ರಸ್ತೆ ಅಭಿವೃದ್ಧಿ, ಸ್ಮಶಾನ ಭೂಮಿ ಗುರುತು ಸೇರಿ ಹಲವು ಮೂಲಸೌಕರ್ಯಗಳ ಬೇಡಿಕೆ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹಾರ ಕಲ್ಪಿಸುವಂತೆ ಡಿಸಿ ಆದೇಶಿಸಿದರು, ರಸ್ತೆ ನಿರ್ಮಾಣ, ಸೇತುವೆ, ಸ್ಮಶಾನ ಭೂಮಿಗಾಗಿ ಗಡುವ ಪಡೆದು ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಆರತಿ ಸ್ವಾಗತ: ಶನಿವಾರ ಎತ್ತಿನಗಾಡಿಯ ಮೂಲಕ ಸ್ವಾಗತ ಕೋರಿದ್ದ ಗ್ರಾಮಸ್ಥರು ಭಾನುವಾರ ದಲಿತ ಕಾಲನಿಗೆ ಭೇಟಿ ನೀಡುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಅಧಿಕಾರಿಗಳನ್ನು ಬರಮಾಡಿಕೊಂಡರು. ಸ್ಥಳೀಯ ವೆಂಕಟರಮಣಪ್ಪ ಅವರ ಮನೆಯಲ್ಲಿ ಉಪಾಹಾರ ಮುಗಿಸಿ ಕಾಲನಿಯಲ್ಲಿ ಜನರ ಅಹವಾಲು ಸ್ವೀಕರಿಸಿದರು. ಕಾಲನಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಿಲ್ಲ, ವಸತಿ ಯೋಜನೆಯ ಸಹಾಯ ಧನ ಸರಿಯಾಗಿ ತಲುಪುತ್ತಿಲ್ಲ, ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಊಟದ ವ್ಯವಸ್ಥೆ ಸರಿಯಾಗಿಲ್ಲ ಎಂಬ ದೂರು ವ್ಯಕ್ತವಾದವು.
ಅಧಿಕಾರಿಗಳ ವಿರುದ್ಧ ಗರಂ: ಶನಿವಾರ ಕಾರ್ಯಕ್ರಮಕ್ಕೆ ಮಳೆರಾಯ ಅಡ್ಡಿಪಡಿಸಿದ ನಡುವೆಯೂ ಜಿಲ್ಲಾಧಿಕಾರಿ ಆರ್.ಲತಾ ಮಳೆ ನಿಲ್ಲುವವರೆಗೆ ಕಾದು ಬಳಿಕ ರಾತ್ರಿ 9 ಗಂಟೆವರೆಗೆ ಗ್ರಾಮದಲ್ಲಿ ಮನೆಮನೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ನಗುಮೊಖದೊಂದಿಗೆ ಜನರೊಂದಿಗೆ ಮಾತನಾಡಿ ಶಾಂತಚಿತ್ತದಿಂದಲೇ ಅಹವಾಲು ಸ್ವೀಕರಿಸಿದರು. ಕೆಲವೊಂದು ಸಮಸ್ಯೆಗಳ ಕುರಿತು ಅಧಿಕಾರಿಗಳ ಅಸ್ಪಷ್ಟ ಉತ್ತರಕ್ಕೆ ಗರಂ ಆಗ ಜಿಲ್ಲಾಧಿಕಾರಿ, ಕರ್ತವ್ಯ ಪಾಲನೆ ಬಗ್ಗೆ ಪಾಠ ಮಾಡಿದರು. ಸರ್ಕಾರದ ಸೌಲಭ್ಯ ಹಾಗೂ ಸಾರ್ವಜನಿಕ ಸೇವೆಗೆ ಜನರು ಕಚೇರಿಗಳನ್ನು ಅಲೆಯಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತವೇ ಮನೆ ಬಾಗಿಲಿಗೆ ಬರುವ ಕಾರ್ಯಕ್ರಮ ರೂಪಿಸಲಾಗಿದೆ, ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಇಲ್ಲವಾದರೆ ಮುಲಾಜಿಲ್ಲದೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.