ಕುಖ್ಯಾತ ಕಳ್ಳರ ಬಂಧನ: 33.77 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

1
ನೆಲಮಂಗಲ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪೊಲೀಸರು ವಿವಿಧ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಚಿನ್ನಾಭರಣಗಳನ್ನು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ವೀಕ್ಷಣೆ ಮಾಡಿದರು. ಎಎಸ್ಪಿ ಪುರುಷೋತ್ತಮ್, ಡಿವೈಎಸ್‌ಪಿ ಗೌತಮ್, ಇನ್‌ಸ್ಪೆಕ್ಟರ್‌ಗಳಾದ ಶಶಿಧರ್, ಬಿ.ಎಸ್.ಮಂಜುನಾಥ್, ರಾಜೀವ್ ಮತ್ತಿತರರು ಉಪಸ್ಥಿರಿದ್ದರು.
Published on

ನೆಲಮಂಗಲ: ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಮಂದಿಯನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ 33.77 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.


ನೆಲಮಂಗಲ ನಗರ ಠಾಣೆಯಲ್ಲಿ ದಾಖಲಿಸಿದ್ದ ಸುಮಾರು 9 ಕಳವು ಪ್ರಕರಣದಲ್ಲಿ ಬೆಂಗಳೂರಿನ ಭವಾನಿನಗರದ ನಿವಾಸಿ ವೀರಮಣಿ (21), ಅಜಿತ್ (24), ಜಯನಗರ ಗಣೇಶ್ (28), ನಂದಿನಿ ಲೇಔಟ್ ಚಂದ್ರ (22) ಎಂಬುವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರ ಹೆಸರು ಪತ್ತೆಯಾಗಿಲ್ಲ. ಆರೋಪಿಗಳ ಮೇಲೆ ವಿವಿಧ ಠಾಣೆಯಲ್ಲಿ 55 ಪ್ರಕರಣ ದಾಖಲಾಗಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.


ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 5 ಮನೆಗಳ್ಳತನ, ನಗದು, ಚಿನ್ನಾಭರಣ ದರೋಡೆ ಮಾಡಿದ್ದ 5 ಪ್ರಕರಣಗಳಲ್ಲಿ 10 ಮಂದಿಯನ್ನು ಬಂಧಿಸಿ 110 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.

ಯೂಟೂಬ್ ನೋಡಿ ಕಳವು: ನಗರ ಠಾಣೆ ವ್ಯಾಪ್ತಿಯ 9 ಪ್ರಕರಣಗಳಲ್ಲಿ ಬಂಧಿಸಿರುವ ಆರೋಪಿಗಳು ಕಳ್ಳತನಕ್ಕೆ ಮುನ್ನ ಯೂಟೂಬ್‌ನಲ್ಲಿ ಕಳ್ಳತನ ಮಾಡುವ ದೃಶ್ಯಾವಳಿ ವೀಕ್ಷಣೆ ಮಾಡಿ, ಅದೇ ಮಾದರಿಯಲ್ಲಿ ಕಳವು, ದರೋಡೆ ಮಾಡುತ್ತಿದ್ದರು ಎಂದು ಎಸ್‌ಪಿ ತಿಳಿಸಿದರು.

ಇಬ್ಬರನ್ನು ಕೊಂದ ಹಂತಕರು: ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದ ಗವಿಗುಟ್ಟೆ ಬಳಿಯ ನಿರ್ಜನ ಪ್ರದೇಶದಲ್ಲಿ ಆಗಸ್ಟ್ 30ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಮೃತದೇಹದ ಗುರುತು ಪತ್ತೆಯಾಗಿದ್ದು, ನೆಲಮಂಗಲ ತಾಲೂಕಿನ ಓಬನಾಯನಹಳ್ಳಿಯ ವೆಂಕಟರಮಣಯ್ಯ ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಬೆಂಗಳೂರಿನ ಮುದ್ದನಪಾಳ್ಯದ ಶಿವರಾಜು (35), ಕೋಲಾರದ ಸಿದ್ದರಾಜು (40), ಮಾದನಾಯಕನಹಳ್ಳಿಯ ಮಂಜುನಾಥ್ (32), ಯಡಿಯೂರಿನ ವಿಜಯ್‌ಕುಮಾರ್ (36) ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣ ಬಳಿಕ ನಾಲ್ವರು ಆರೋಪಿಗಳು ಸ್ನೇಹಿತ ಯಡಿಯೂರು ಸಮೀಪದ ಸಂಗಟ್ಟನಹಳ್ಳಿಯ ಲೋಕೇಶ್ (43) ಎಂಬಾತನ ಜತೆಗೂಡಿ ಬಿಡದಿಯ ಲಾಡ್ಜ್ ಒಂದಕ್ಕೆ ತೆರಳಿ ಮದ್ಯಸೇವನೆ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು 4 ಮಂದಿ ಲೋಕೇಶ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ, ಕುದೂರು ಬಳಿಯ ನಿರ್ಜನ ಪ್ರದೇಶದಲ್ಲಿ ಮೃತದೇಹ ಬಿಸಾಡಿ ಪರಾರಿಯಾಗಿದ್ದರು. ತನಿಖೆ ಕೈಗೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನು ಮದ್ದೂರಿನ ನಿರ್ಜನ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ: ಡಿವೈಎಸ್‌ಪಿ ಗೌತಮ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಶಶಿಧರ್, ಮಂಜುನಾಥ್ ನೇತೃತ್ವದಲ್ಲಿ ಪ್ರಕರಣಗಳನ್ನು ಭೇದಿಸಿದ್ದು, ತಂಡದ ಕಾರ್ಯವನ್ನು ಪ್ರಶಂಶಿಸಿದ ಪೊಲೀಸ್ ವರಿಷ್ಠಾಧಿಕಾರಿ, ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net