ಅಗ್ನಿ ಅವಘಡವಾಗದಂತೆ ಎಚ್ಚರ ವಹಿಸುವುದು ಅಗತ್ಯ: ಎಡಿಸಿ ವಿಜಯಾ ಮಾಹಿತಿ

222
Published on

ಹೊಸಕೋಟೆ: ಅಗ್ನಿ ಅವಘಡ ಸೇರಿ ವಿವಿಧ ರೀತಿಯ ವಿಪತ್ತಿನ ತುರ್ತು ಸಂದರ್ಭದಲ್ಲಿ ಸಹಾಯವಾಣಿ 112ಕ್ಕೆ ಕರೆ ಮಾಡಿ ನೆರವು ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿ ವಿಜಯ ಈ ರವಿಕುಮಾರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಾರ್ಖಾನೆಗಳು, ಬಾಯ್ಲರ್‌ಗಳು ಕೈಗಾರಿಕ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ತೈಲ ಮಾರುಕಟ್ಟೆ ಕಂಪೆನಿಗಳ ಸಹಯೋಗದೊಂದಿಗೆ ಹೊಸಕೋಟೆ ತಾಲೂಕಿನ ದೇವನಗುಂದಿ ಬಳಿ ಇರುವ ಬಿಪಿಸಿಎಲ್ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಸಂಗ್ರಹಣ ಘಟಕದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಅಣುಕು ಪ್ರದರ್ಶನದಲ್ಲಿ ಮಾತನಾಡಿದರು.

ಕಾರ್ಖಾನೆ ಮಾತ್ರವಲ್ಲದೆ ಪ್ರತಿ ಮನೆಗಳಲ್ಲೂ ಅಗ್ನಿ ಅವಘಡವಾಗದಂತೆ ಎಚ್ಚರ ವಹಿಸಬೇಕು. ಸಹಾಯವಾಣಿ 112 ಕ್ಕೆ ಕರೆ ಮಾಡಿ ಪೊಲೀಸ್, ಅಗ್ನಿಶಾಮಕ, ಅಂಬುಲೆನ್ಸ್ ಸೇವೆ ಉಪಯೋಗಿಸಕೊಳ್ಳಬೇಕು ಎಂದು ಹೇಳಿದರು.

ಮೊದಲು ಮಾಹಿತಿ ನೀಡಿ: ಜಿಲ್ಲೆಯಲ್ಲಿ ಅಗ್ನಿ ಅವಘಡ, ಸ್ಪೋಟದಂಥ ಸಂದರ್ಭದಲ್ಲಿ ತಾಲೂಕು ಆಡಳಿತಕ್ಕೆ ಮೊದಲು ಮಾಹಿತಿ ನೀಡಬೇಕು. ಸಾವು ನೋವು ತಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರಬೇಕು. ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಸಾವು ನೋವುಗಳನ್ನು ತಡೆಯಲು ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ಪರಿಸ್ಥಿತಿ ನಿಭಾಯಿಸಲು ಸದಾ ಸನ್ನದ್ಧರಾಗಿರಬೇಕು ಎಂದರು.

ಪ್ರಾತ್ಯಕ್ಷಿಕೆ: ಅಣುಕು ಪ್ರದರ್ಶನದಲ್ಲಿ ರಾಸಾಯಿನಿಕ ಸೋರಿಕೆ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳು, ಕೈಗೊಳ್ಳಬೇಕಾದ ಮುಂಜಾಗ್ರತೆ, ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ದುರಂತದಿಂದ ಸಂಭವಿಸುವ ಸಾವು-ನೋವು ಮತ್ತು ನಷ್ಟಗಳನ್ನು ಕನಿಷ್ಟಗೊಳಿಸುವ ಹಾಗೂ ಪರಿಣಾಮಕಾರಿಯಾಗಿ ತುರ್ತು ನಿಭಾಯಿಸುವ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸುವುದು. ಆಡಳಿತ ವರ್ಗದವರಿಗೆ ವಿಪತ್ತುಗಳ ನಿರ್ವಹಣೆಯಲ್ಲಿನ ಪಾತ್ರಗಳು ಸೇರಿ ಅರಿವು ಮೂಡಿಸುವುದು ಪ್ರಾತ್ಯಕ್ಷಿಕೆಯ ಉದ್ದೇಶವಾಗಿತ್ತು.

ಅರ್ಧ ತಾಸು ಅಣುಕು ಪ್ರದರ್ಶನ: ಅರ್ಧ ಗಂಟೆಯ ಅಣುಕು ಪ್ರದರ್ಶನದಲ್ಲಿ 8 ಅಂಬುಲೆನ್ಸ್‌ಗಳು, 2 ಅಗ್ನಿಶಾಮಕ ದಳ ವಾಹನಗಳು, ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿ 300ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಮೂಲಕ ಅಣುಕು ಪ್ರದರ್ಶನ ಯಶಸ್ವಿಯಾಯಿತು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು, ಸದಸ್ಯರು ಅಣುಕು ಪ್ರದರ್ಶನವನ್ನು ವೀಕ್ಷಿಸಿ ಸಲಹೆ ಸೂಚನೆ ನೀಡಿದರು.\

ಅಣುಕು ಪ್ರದರ್ಶನದ ಹೇಗಿತ್ತು: ದೇವನಗೊಂದಿ ಪೆಟ್ರೋಲಿಯಂ ಮತ್ತು ಎಲ್ಪಿಜಿ ಸಂಗ್ರಹಣಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸದಾಗ ಕಾರ್ಖಾನೆ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲಾಗದೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಹಾಯ ಕೋರಿದರು. ಕೂಡಲೇ ಅಪರಾ ಜಿಲ್ಲಾಧಿಕಾರಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ತುರ್ತು ಪರಿಸ್ಥಿತಿ ಘೋಷಿಸಿದರು. ಹತ್ತಿರದ ಶಾಲೆಯೊಂದರಲ್ಲಿ ತೆರೆಯಲಾಗಿದ್ದ ಕಂಟ್ರೋಲ್ ರೂಂ ಮೂಲಕ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಅವರನ್ನು ಕಾರ್ಯ ಪ್ರವೃತ್ತರನ್ನಾಗಿಸಿದರು. ಅವಘಡದಲ್ಲಿ ಗಾಯಗೊಂಡವರನ್ನು ರಕ್ಷಿಸಿ ಅಂಬುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಅವಘಡ ಸಂಭವಿಸಿದ ಸ್ಥಳದಿಂದ ಹತ್ತಿರದಲ್ಲಿದ್ದ ವಾಗಟ ಗ್ರಾಮದ ವರದರಾಜ ಸ್ವಾಮಿ ದೇವಾಲಯ ಟ್ರಸ್ಟ್ ನಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ತುರ್ತುಪರಿಸ್ಥಿತಿ ಹಿಂಪಡೆದು ಆದೇಶ ಹೊರಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net