ತಿಂಗಳೊಳಗೆ ಹಕ್ಕುಪತ್ರ ವಿತರಣೆಗೆ ಕ್ರಮ: ಸಚಿವ ಎಂಟಿಬಿ ನಾಗರಾಜ್​ ಭರವಸೆ

1
Published on

ಜಡಿಗೇನಹಳ್ಳಿ: ದೊಡ್ಡನಲ್ಲಾಳ, ಉಪ್ಪಸಂದ್ರ ಹಾಗೂ ಉಮ್ಮಲು ಗ್ರಾಮಗಳಲ್ಲಿ ಬಾಕಿ ಇರುವ ಫಲಾನುಭವಿಗಳಿಗೆ ತಿಂಗಳೊಳಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್​ ಭರವಸೆ ನೀಡಿದರು.

ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಹೋಬಳಿಯ ದೊಡ್ಡನಲ್ಲಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
2014ರಲ್ಲಿ ಶಾಸಕನಾಗಿದ್ದಾಗ ಹೊಸಕೋಟೆಯ ಗಡಿಗ್ರಾಮಗಳಲ್ಲಿ ಹೊಡೆದಾಟ, ಬಡಿದಾಟ ಪ್ರಕರಣಗಳು ಸಾಮಾನ್ಯವಾಗಿದ್ದವು. ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿತ್ತು. ಆಗ ಗಡಿಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲು ನಿರ್ಧರಿಸಿದೆ. ಗ್ರಾಮಗಳಲ್ಲಿ ಹೊಡೆದಾಟಗಳಿಗೆ ಬ್ರೇಕ್​ ಹಾಕಿ, ಶಾಂತಿ ನೆಲೆಸುವಂತೆ ಮಾಡಲು ಸಾಕಷ್ಟು ಶ್ರಮಿಸಬೇಕಾಯಿತು ಎಂದರು.

ಗಡಿಗ್ರಾಮಗಳಲ್ಲಿ ಈ ಹಿಂದೆ ಸಾಕಷ್ಟು ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಹಕ್ಕುಪತ್ರ ನೀಡಲು ತಡವಾಗಿದೆ. ಪ್ರಸ್ತುತ ಸಮಸ್ಯೆಗಳೆಲ್ಲವೂ ಬಗೆಹರಿದಿರುವುದಾಗಿ ಹೇಳಿದರು.

ಅಭಿವೃದ್ಧಿಗೆ ವೇಗ: ವಿಧಾನ ಪರಿಷತ್​ ಸದಸ್ಯರ ಅನುದಾನ, ಸರ್ಕಾರದ ವಿಶೇಷ ಅನುದಾನ ಸೇರಿ ವಿವಿಧ ಅನುದಾನಗಳಡಿ ಹೊಸಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಹಿಂದಿನಿಂದಲೂ ನನ್ನ ಕರ್ಮ ಭೂಮಿಯೆಂದೇ ಭಾವಿಸಿರುವ ಹೊಸಕೋಟೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇದಕ್ಕೆ ಜನರ ಆಶೀರ್ವಾದ ಮುಖ್ಯ ಎಂದು ಹೇಳಿದರು.

ಯಾವುದೇ ರಾಜಿ ಇಲ್ಲ: ಅಧಿಕಾರ ಇಲ್ಲದಾಗಲೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೆ. ಜನರ ಅಹವಾಲು ಸ್ವೀಕರಿಸಿ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೆ. ಅಧಿಕಾರಿಗಳು ಸ್ಪಂದಿಸುತ್ತಿದ್ದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಬಿಡುವುದಿಲ್ಲ. ಕಾಮಗಾರಿಗೆ ಚಾಲನೆ ನೀಡಿ ಸುಮ್ಮನೆ ಕೂರುವುದಿಲ್ಲ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುತ್ತೇನೆ. ಲೋಪ ಕಂಡುಬಂದರೆ ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಂಟಿಬಿ ನಾಗರಾಜ್​ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net