ಪಂಚಾಯಿತಿ ಎಡವಟ್ಟಿಗೆ ವೃದ್ಧೆ ಬೀದಿಪಾಲು: ಮನೆ ಕೆಡವಿ ಆಕಾಶ ದಿಟ್ಟಿಸುತ್ತಿರುವ ಹಿರಿಯ ಜೀವ, ಡಿಸಿ ನಡೆಯಲ್ಲಾದರೂ ಸಿಗುವುದೇ ಸೂರು?

3
ದೇವರಹೊಸಹಳ್ಳಿಯಲ್ಲಿ ಕೆಡವಿದ ಮನೆ.
Published on

ದಾಬಸ್‌ಪೇಟೆ: ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಮಾಡಿದ ಎಡವಟ್ಟಿನಿಂದಾಗಿ ವೃದ್ಧೆಯೊಬ್ಬರು ಬೀದಿಗೆ ಬಂದಿರುವ ಪ್ರಕರಣ ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ದೇವರಹೊಸಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಪುಟ್ಟಮ್ಮ ಎಂಬ ಹಿರಿ ಜೀವ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಲೇ ಕಣ್ಣೀರು ಹಾಕುತ್ತಿದೆ.
ಶಿಥಿಲಗೊಂಡಿದ್ದ ಮನೆ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಹೇಳಿದ್ದ ಪಂಚಾಯಿತಿ ಅಧಿಕಾರಿಗಳು ಇದೀಗ ಕೈಚೆಲ್ಲಿದ್ದಾರೆ. ಹೊಸ ಮನೆ ನಿರ್ಮಾಣದ ಕನಸಿನಲ್ಲಿ ಇದ್ದ ಮನೆಯನ್ನೂ ಕೆಡವಿದ್ದ ವೃದ್ಧೆ ಸೂರಿಲ್ಲದೆ ಪರಿತಪಿಸುವಂತಾಗಿದೆ.

ಜಾತಿ ಕಾಲಂನಲ್ಲಿ ಎಡವಟ್ಟು: ಪುಟ್ಟಮ್ಮ 2016ರಲ್ಲಿ ಮಣ್ಣಿನ ಮನೆ ಕುಸಿಯುವ ಹಂತದಲ್ಲಿದ್ದಾಗ ಮನೆ ಕಟ್ಟಲು ಅನುದಾನ ನೀಡುವಂತೆ ಗ್ರಾಪಂಗೆ ಮನವಿ ಸಲ್ಲಿಸಿದ್ದರು. ಆಗ ಕಂಪ್ಯೂಟರ್ ಆಪರೇಟರ್ ಆಗಿದ್ದವರು ಪುಟ್ಟಮ್ಮ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೂ ಜಾತಿ ನಮೂದಿಸುವ ಕಾಲಂನಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಿ ವರದಿ ಸಲ್ಲಿಸಿದ್ದರು. ಈ ವಿಚಾರ ಗೊತ್ತಿಲ್ಲದ ಪುಟ್ಟಮ್ಮಆಶ್ರಯ ಯೋಜನೆಯಡಿ ಅನುದಾನ ನಿರೀಕ್ಷೆಯಲ್ಲಿದ್ದರು. 2022-23ನೇ ಸಾಲಿಗೆ ಪ್ರತಿ ಪಂಚಾಯಿತಿ ಸದಸ್ಯರಿಗೆ 2 ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಅದರಲ್ಲಿ 1 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಅದರಂತೆ ಪುಟ್ಟಮ್ಮನ ಹೆಸರಿಗೆ ಮಂಜೂರು ಮಾಡುವಂತೆ ಪಂಚಾಯಿತಿ ಶಿಾರಸು ಮಾಡಿತ್ತು. ಈ ವಿಷಯ ತಿಳಿದ ಪುಟ್ಟಮ್ಮ ಹಳೇ ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು. ಈಗಾಗಲೇ ಪರಿಶಿಷ್ಟ ಜಾತಿ ಎಂದು ನಮೂದಿಸಿದ್ದರಿಂದ ಮನೆ ಮಂಜೂರು ಸಾಧ್ಯವಿಲ್ಲವೆಂದು ಪಂಚಾಯಿತಿ ಮೇಲಧಿಕಾರಿಗಳು ಕಡತ ವಾಪಸ್ ಕಳುಹಿಸಿದ್ದಾರೆ.

ದಾಖಲೆ ಇದೆ: ಈಕೆ ತಹಸೀಲ್ದಾರ್ ಅವರಿಂದ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಪಂಗಡವೆಂದೇ ದಾಖಲಾಗಿದೆ. ಆದರೆ ಸರ್ಕಾರಕ್ಕೆ ಸಲ್ಲಿಸಿದ ದಾಖಲೆಯಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಲಾಗಿರುವುದೇ ಈ ಎಡವಟ್ಟಿಗೆ ಕಾರಣವಾಗಿದೆ.


ಡಿಸಿ ನಡೆಯಿಂದ ಸಿಗುವುದೇ ಭಾಗ್ಯ: ಪುಟ್ಟಮ್ಮನಿಗೆ ಅಂಗವಿಕಲ ಮಗನಿದ್ದಾನೆ, ವೃದ್ಧೆ ವಯಸ್ಸಹಜ ಕಾಯಿಲೆಗಳಿಂದ ಹೈರಾಣಾಗಿದ್ದಾರೆ. ಶನಿವಾರ ಡಿಸಿ ನಡಿಗೆ ಹಳ್ಳಿಯ ಕಡೆ ಕಾರ್ಯಕ್ರಮ ಇದೇ ದೇವನಹೊಸಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ತಹಸೀಲ್ದಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ಮೂಲಕವಾದರೂ ನೊಂದ ಹಿರಿಯ ಜೀವಕ್ಕೆ ಸೂರು ಸಿಗಬಹುದು ಎಂಬುದು ‘ವಿಜಯವಾಣಿ’ಕಳಕಳಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net