ಪಾಲಿಕೆ ವಿಭಜಿಸಿದರೆ ಬೆಂಗಳೂರು ಅಭಿವೃದ್ಧಿ: ಜಮೀರ್

zameer
ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ ಏರ್ಪಡಿಸಿದ್ದ ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಜಮೀರ್ ಅಹ್ಮದ್ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಮಧು ಬಂಗಾರಪ್ಪ, ಬಲ್ಕಿಶ್‌ಬಾನು, ಜಿ.ಪಲ್ಲವಿ ಮುಂತಾದವರಿದ್ದರು.
Published on

ಶಿವಮೊಗ್ಗ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಿ ಬೆಂಗಳೂರು ಸೌತ್, ನಾರ್ಥ್ ಹಾಗೂ ಸೆಂಟ್ರಲ್ ಎಂದು ಮೂರು ಪಾಲಿಕೆಯನ್ನು ರಚಿಸಿದರೆ ಮಾತ್ರ ಬೆಂಗಳೂರಿನ ಅಭಿವೃದ್ಧಿ ಸಾಧ್ಯ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ. ಒಂದೇ ಪಾಲಿಕೆಯಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಕೆಲ ಶಾಸಕರು ಐದು ಪಾಲಿಕೆ ಬೇಕು ಎನ್ನುತ್ತಿದ್ದಾರೆ. ನನ್ನ ಪ್ರಕಾರ ಮೂರು ಪಾಲಿಕೆ ರಚನೆ ಒಳ್ಳೆಯದು ಎಂದರು.

ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಈ ಹಿಂದೆಯೂ ಇಂತಹ ಘಟನೆಗಳು ಅಲ್ಲಿ ನಡೆದಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯಾರೂ ಕಾನೂನು ಮೀರಿ ವರ್ತಿಸಬಾರದು. ಒಂದು ವೇಳೆ ಕಾನೂನು ಉಲ್ಲಂಘನೆಯಾಗಿದ್ದರೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಎಚ್‌ಡಿಕೆ ವಿರುದ್ಧ ಕಿಡಿ: ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ಆಗ ಅವರು ಏನು ಮಾಡಿದ್ದಾರೆ? ಅವರ ಸಾಧನೆಯನ್ನು ವಿವರಿಸಲಿ. ನಾವು ನಮ್ಮ ಸಾಧನೆ ಹೇಳುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಸವಾಲು ಹಾಕಿದರು. ಒಂದು ಬಾರಿ ರೈತರ ಸಾಲ ಮನ್ನಾ ಮಾಡಿದ್ದ ಕುಮಾರಸ್ವಾಮಿ ಈಗಲೂ ಅದನ್ನೇ ಹೇಳಿಕೊಳ್ಳುತ್ತಾರೆ. ಅವರು ರಾಜಕೀಯ ಮಾಡಿದಂತೆ ಕಾಂಗ್ರೆಸ್‌ನವರು ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net