

ಬೆಂಗಳೂರು: ಚಾಮರಾಜಪೇಟೆಯ ವಿವಿಧ ರಸ್ತೆಗಳಲ್ಲಿ ನಡೆದಿರುವ ವೈಟ್ ಟಾಪಿಂಗ್ ಸಂಬಂಧಿತ ಕಾಮಗಾರಿಗಳಿಗೆ ಚುರುಕುಗೊಳಿಸುವುದಾಗಿ ಬೆಂಗಳೂರು ಜಲಮಂಡಳಿ ಭರವಸೆ ನೀಡಿದೆ.
ವಿಜಯವಾಣಿ ಪತ್ರಿಕೆಯ ಮಂಗಳವಾರದ (ಡಿ.17) ಸಂಚಿಕೆಯಲ್ಲಿ ‘ಚಾಮರಾಜಪೇಟೆಯಲ್ಲಿ ರಸ್ತೆ ದುರವಸ್ಥೆ’ ಶೀರ್ಷಿಕೆಯಡಿ ವಿಶೇಷ ಲೇಖನ ಪ್ರಕಟಿಸಿ ಈ ಭಾಗದ ಜನರಿಗೆ ಆಗುತ್ತಿರುವ ತೊಂದರೆ ಕುರಿತು ವಿವರಿಸಲಾಗಿತ್ತು. ಈ ವಿಚಾರವಾಗಿ ಜಲಮಂಡಳಿ ಸ್ಪಂದಿಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ಪೂರ್ಣಗೊಳಿಸುವ ಅಭಯ ನೀಡಿದೆ.
ಸದ್ಯ ಚಾಮರಾಜಪೇಟೆಯ 3ನೇ ಮುಖ್ಯರಸ್ತೆಯಲ್ಲಿ 300 ಮಿ.ಮೀ. ವ್ಯಾಸದ ಆರ್‌ಸಿಸಿ ಕೊಳವೆ ಮಾರ್ಗ ಹಾಗೂ 100 ಮಿ.ಮೀ. ವ್ಯಾಸದ ನೀರಿನ ಕೊಳವೆ ಅಳವಡಿಸುವ ಕೆಲಸ ಸಾಗಿದೆ. ಇದರ ಜತೆಗೆ ರಸ್ತೆ ಬದಿ ಫುಟ್‌ಪಾತ್ ಹಾಗೂ ಶೋಲ್ಡರ್ ಡ್ರೈನ್ ಕೆಲಸವೂ ಸಾಗಿದೆ. ಚರಂಡಿ ವ್ಯವಸ್ಥೆಯು ಅತಿ ಹಳೆಯದಾಗಿರುವ ಕಾರಣ ಯುಟಿಲಿಟಿ ಬದಲಾವಣೆ ಮಾಡಿಯೇ ಕೆಲಸ ಮಾಡಬೇಕಿದ್ದು, ಇದರಿಂದ ಕಾಮಗಾರಿ ತುಸು ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಹಾಲಿ ನಡೆದಿರುವ ಜಲಮಂಡಳಿ ಕೆಲಸದ ಬಳಿಕ ಪಾಲಿಕೆಯಿಂದ ವೈಟ್ ಟಾಪಿಂಗ್‌ನ ಮುಖ್ಯ ಕೆಲಸ ಆರಂಭಿಸಲಾಗುತ್ತದೆ. ಈ ಕಾಮಗಾರಿ ಆರಂಭವಾಗುತ್ತಿದ್ದಂತೆ ಫುಟ್‌ಪಾತ್ ಕೆಲಸಕ್ಕೂ ಚಾಲನೆ ಸಿಗಲಿದೆ. ಈ ವಿಚಾರವಾಗಿ ಸ್ಥಳೀಯ ಜನರೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು, ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.