ಬೆಂಗಳೂರು ವಿಧಾನಸೌಧ ಚಲೋ 10ರಂದು

1 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಮಾ. 10ರಂದು ಬೆಂಗಳೂರು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಜಡಗನ್ನವರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್​ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ಮನರೇಗಾ ಯೋಜನೆ ಅಡಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ 200 ಮಾನವ ದಿನಗಳ ಕೆಲಸ ಹಾಗೂ ಅದಕ್ಕೆ ಕನಿಷ್ಠ 600 ರೂ. ವೇತನ ಖಾತ್ರಿಪಡಿಸಬೇಕು. ಹೊಸ ಕೃಷಿ ಮಾರುಕಟ್ಟೆ ನೀತಿ ಕೈ ಬಿಡಬೇಕು. ಬೀಜ ರಸಗೊಬ್ಬರ, ಕೀಟನಾಶಕಗಳನ್ನು ಅತ್ಯಂತ ಕಡಿಮೆ ದರದಲ್ಲಿ ಸರಬರಾಜು ಮಾಡುವಂತೆ ಆಗ್ರಹಿಸಲಾಗುವುದು ಎಂದರು.

ರೈತರ ಸಾಲ ಮನ್ನಾ, 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ನೀಡುವುದು, ವಿದ್ಯುತ್​ ಕಾಯ್ದೆ 2023 ರದ್ದುಗೊಳಿಸಿ, ವಿದ್ಯುತ್​ ಖಾಸಗೀಕರಣ ಹಿಂಪಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಲ್ಲ ತಾಲೂಕು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಈ ಹೋರಾಟ ಏರ್ಪಡಿಸಲಾಗಿದೆ. ರಾಜ್ಯದ ವಿವಿಧ ಕಡೆಗಳಿಂದ ಸುಮಾರು 8 ಸಾವಿರ ರೈತರು ಹಾಗೂ ಜಿಲ್ಲೆಯಿಂದ 700 ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.

ದೀಪಾ ಧಾರವಾಡ, ಶರಣು ಗೋನವಾರ, ಹನುಮೇಶ ಹುಡೇದ, ಮಾರುತಿ ಪೂಜಾರ, ಮಂಜು ಪೂಜಾರ, ಗೋವಿಂದ ಕೃಷ್ಣಪ್ಪನವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net