ಭ್ರಷ್ಟಾಚಾರ ಆರೋಪಕ್ಕೀಡಾಗಿರುವ ಜಿಲ್ಲಾಧಿಕಾರಿ ಮಂಜುನಾಥ್ ಎತ್ತಂಗಡಿ

Manjunath J IAS
Published on

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿದ್ದು, ಆ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಆಗಿದ್ದ ವೇಳೆ ಅಕ್ರಮದಲ್ಲಿ ತೊಡಗಿದ್ದರು ಎಂಬುದಾಗಿ ಆರೋಪ ಬಂದಿದ್ದು, ನಿನ್ನೆಯಷ್ಟೇ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಸುಮಾರು ಹತ್ತು ಗಂಟೆಗಳ ಕಾಲ ಅವರ ವಿಚಾರಣೆ ನಡೆಸಲಾಗಿತ್ತು.

ಭೂವ್ಯಾಜ್ಯ ಸಂಬಂಧ ಮಂಜುನಾಥ್ ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇವರ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಇವರನ್ನು ಮೂರನೇ ಆರೋಪಿಯಾಗಿ ಕೇಸು ದಾಖಲಿಸಿಕೊಳ್ಳಲಾಗಿದೆ.

ಇಂದು ಮಂಜುನಾಥ್ ಅವರನ್ನು ಇಂಟೆಗ್ರೇಟೆಡ್​ ಚೈಲ್ಡ್​ ಪ್ರೊಟೆಕ್ಷನ್​ ಸ್ಕೀಮ್​ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ ಅವರನ್ನು ನೇಮಕ ಮಾಡಲಾಗಿದೆ. ಇವರು ಇದಕ್ಕೂ ಮುನ್ನ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net