

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ದೇಶದಲ್ಲಿಯೇ ಅಗ್ರಮಾನ್ಯ ಕಾಲೇಜಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ನ್ಯಾಯವಾದಿ ಮತ್ತು ನ್ಯಾಯಮೂರ್ತಿಗಳಾಗಿ ವಿವಿಗೆ ಗೌರವ ತಂದಿದ್ದಾರೆಂದು ದೆಹಲಿ ಉಚ್ಚ ನ್ಯಾಯಾಲದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವು ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಎರಡು ಸುಸಜ್ಜಿತ ವಿಚಾರ ಸಂಕಿರಣ ಸಭಾಂಗಣದಲ್ಲೊಂದಾದ ಪ್ರೊ. ವಿ.ಬಿ. ಕುಟಿನೋ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
1992ರಲ್ಲಿ ಪ್ರೊ.ವಿ.ಬಿ ಕುಟಿನೋ ಅವರು ಆಡಿದ ಒಂದು ಮಾತು ನನ್ನ ಜೀವನವನ್ನೆ ಬದಲಾಯಿಸಿ, ಇಂದು ದೆಹಲಿಯಲ್ಲಿ ನ್ಯಾಯಮೂರ್ತಿಯಾಗಿ ಕೂರಿಸಿದೆ ಎಂದು ಸ್ಮರಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿರ್ ಮಾತನಾಡಿ, ಸರ್ಕಾರಿ ಕಾಲೇಜು ಮತ್ತು ವಿವಿಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಕಾರ್ಪೋರೆಟ್ ಮಾದರಿಯಲ್ಲಿ ಸಭಾಂಗಣ ನಿರ್ಮಿಸಿರುವುದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್, ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ, ಸಿಕ್ಕಿಂ ಅಡ್ವೋಕೇಟ್ ಜನರಲ್ ಬಸವಪ್ರಭು ಎಸ್. ಪಾಟೀಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್, ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ.ವಿ. ಸುದೇಶ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೌತಮ್ ಚಾಂದ್ ಸೇರಿ ಹಲವರು ಉಪಸ್ಥಿತರಿದ್ದರು.