ಹಜ್ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ಇಬ್ಬರು ಸೂರ್ಯನ ಶಾಖಕ್ಕೆ ಬಲಿ

Hajj
Published on

ಬೆಂಗಳೂರು: ಸೌದಿ ಅರೇಬಿಯಾದಲ್ಲಿ ಈ ವರ್ಷದ ಹಜ್ ಯಾತ್ರೆ ವೇಳೆ ಸೂರ್ಯನ ಅತಿಯಾದ ಶಾಖಕ್ಕೆ ನಲುಗಿ ಸಾವನ್ನಪ್ಪಿದ ನೂರಾರು ಜನರಲ್ಲಿ ಬೆಂಗಳೂರಿನ ಇಬ್ಬರು ಯಾತ್ರಾರ್ಥಿಗಳು ಸೇರಿದ್ದಾರೆ. ಮೃತರನ್ನು ಆರ್.ಟಿ. ನಗರ ಮತ್ತು ಫ್ರೇಜರ್ ಟೌನ್ ನಿವಾಸಿಗಳಾದ ಕೌಸರ್ ರುಕ್ಸಾನಾ (69) ಮತ್ತು ಅಬ್ದುಲ್ ಅನ್ಸಾರಿ (54) ಎಂದು ಗುರುತಿಸಲಾಗಿದೆ.

ಮೆಕ್ಕಾದ ಹೊರವಲಯದಲ್ಲಿರುವ ಮಿನಾ ಕಣಿವೆಯಲ್ಲಿ ಯಾತ್ರಾರ್ಥಿಗಳು ರಾಮಿ ಅಲ್-ಜಮಾರತ್ ಆಚರಣೆಯಲ್ಲಿ ಭಾಗವಹಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಸರ್ಫರಾಜ್ ಖಾನ್ ತಿಳಿಸಿದ್ದಾರೆ. ಸೌದಿ ಅರೇಬಿಯಾ ಸರ್ಕಾರದೊಂದಿಗಿನ ಸಂಪ್ರದಾಯಗಳು ಮತ್ತು ಒಪ್ಪಂದಗಳನ್ನು ಉಲ್ಲೇಖಿಸಿದ ಅವರು, ತೀರ್ಥಯಾತ್ರೆಯ ಸಮಯದಲ್ಲಿ ಸಾವನ್ನಪ್ಪುವ ಯಾತ್ರಾರ್ಥಿಗಳ ಮೃತದೇಹಗಳನ್ನು ಅವರ ಸ್ವಂತ ಸ್ಥಳಕ್ಕೆ ಹಿಂತಿರುಗಿಸಲಾಗುವುದಿಲ್ಲ. ಆದ್ದರಿಂದ, ರುಕ್ಸಾನಾ ಮತ್ತು ಅನ್ಸಾರಿ ಅಲ್ಲಿಯೇ ಸಮಾಧಿ ಮಾಡಿದ್ದಾರೆ. ಮರಣ ಪ್ರಮಾಣ ಪತ್ರಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಖಾನ್ ಮಾಹಿತಿ ನೀಡಿದರು.

ರುಕ್ಸಾನಾ ಮತ್ತು ಅನ್ಸಾರಿ ಇದೇ ತಿಂಗಳು 22ರಂದು ಬೆಂಗಳೂರಿಗೆ ಮರಳಬೇಕಿತ್ತು. ಅಷ್ಟರಲ್ಲಿ ಈ ದುರಂತ ಸಂಭವಿಸಿದೆ. ಈ ವರ್ಷ ರಾಜ್ಯ ಸರ್ಕಾರ ಸುಮಾರು 13,500 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 10,300ಕ್ಕೂ ಹೆಚ್ಚು ಮಂದಿ ಹಜ್ ಯಾತ್ರೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net