

ಗುರುಪುರ: ಶಿಥಿಲಗೊಂಡಿರುವ ಪೊಳಲಿ - ಅಡ್ಡೂರು ಸೇತುವೆ ಪರಿಶೀಲಿಸಲು ಆ.26 ಅಥವಾ 27ರಂದು ಬೆಂಗಳೂರಿನಿಂದ ಉನ್ನತ ಮಟ್ಟದ ತಜ್ಞರ ಸಮಿತಿ ವಿಶೇಷ ತಂತ್ರಜ್ಞಾನ ಒಳಗೊಂಡ ಯಂತ್ರೋಪಕರಣಗಳೊಂದಿಗೆ ಆಗಮಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇತ್ತೀಚೆಗೆ ಅಡ್ಡೂರಿಗೆ ಭೇಟಿ ನೀಡಿದ ಸಂದರ್ಭ ಹೇಳಿಕೆ ನೀಡಿದ್ದರೂ, ಇದುವರೆಗೆ ಅಂತಹ ತಜ್ಞರ ಸಮಿತಿ ಅಡ್ಡೂರಿಗೆ ಭೇಟಿ ನೀಡಿಲ್ಲ.
ಸೇತುವೆ ಮೇಲಿಂದ ಎಷ್ಟು ಭಾರದ ವಾಹನಗಳು ಸಂಚರಿಸಬಹುದು (ಧಾರಣಾ ಸಾಮರ್ಥ್ಯ) ಮತ್ತು ಸೇತುವೆಯ ಪಿಲ್ಲರ್‌ಗಳ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ತಜ್ಞರ ತಂಡ ಆಗಮಿಸಲಿದೆ ಎಂದಿದ್ದ ಡಿಸಿ, ಸಮಿತಿ ವರದಿ ಬಳಿಕವೇ ಹೊಸ ಸೇತುವೆ ನಿರ್ಮಾಣ ಅಥವಾ ಸೇತುವೆ ಬಲಿಷ್ಠಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದರು.
ಬುಧವಾರದವರೆಗೆ ಅಂತಹ ಯಾವುದೇ ಯಂತ್ರೋಪಕರಣಗಳು ಅಡ್ಡೂರಿಗೆ ಆಗಮಿಸಿಲ್ಲ. ಪಿಡಬ್ಲ್ಯೂಡಿ ಇಲಾಖೆಯ ಅಧಿಕೃತ ಮೂಲವೊಂದರ ಪ್ರಕಾರ, ಆಧುನಿಕ ಯಂತ್ರ ಕೆಟ್ಟು ಹೋಗಿದ್ದು, ಬಿಡಿ ಭಾಗ ಬರಲಿಕ್ಕಿತ್ತು. ಹಾಗಾಗಿ ಇಲ್ಲಿಗೆ ಆಗಮನ ವಿಳಂಬವಾಗಿದೆ. ಬಿಡಿ ಭಾಗ ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಯಂತ್ರ ದುರಸ್ತಿಯಾದ ಬಳಿಕ ಅಂದರೆ, ಗುರುವಾರ ಅಥವಾ ಶುಕ್ರವಾರ ಇಲ್ಲಿಗೆ ಆಗಮಿಸಬಹುದು ಎಂದು ತಿಳಿದು ಬಂದಿದೆ.
ಸೇತುವೆ ಮೇಲಿಂದ ಈಗ ಘನ ವಾಹನ ಸಂಚಾರ ನಿಷೇಧಿಸಲಾಗಿದೆ. ಗೂಡ್ಸ್ ಟೆಂಪೋ, ರಿಕ್ಷಾ, ಮಿನಿ ಲಾರಿ-ಬಸ್‌ಗಳು ಸಂಚರಿಸುತ್ತಿವೆ. ಬಸ್ ಸಂಚಾರ ನಿಷೇಧಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪೊಳಲಿ ಸಾರ್ವಜನಿಕ ಸಂಘಟನೆಯೊಂದರಿಂದ ಸೇವೆಗಿಳಿದಿರುವ ಮಿನಿ ಬಸ್ ಉಚಿತ ಸೇವೆ ಬಹುತೇಕ ದೇವಸ್ಥಾನದ ಭಕ್ತರಿಗೆ ಸೀಮಿತವಾದಂತಿದೆ. ಈ ಬಸ್ ವಿದ್ಯಾರ್ಥಿಗಳ ಸಮಯಕ್ಕೆ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ಸೇತುವೆ ಬಲಿಷ್ಠಗೊಳಿಸುವುದಾದರೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.