ಬೆಂ. ಉಪನಗರ ರೈಲು ಯೋಜನೆ: 31 ಮೀ. ಉದ್ದದ ಯು - ಗರ್ಡರ್ ಅಳವಡಿಕೆ ಯಶಸ್ವಿ

kride gurder
Published on

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್ -2ರಲ್ಲಿ 31 ಮೀಟರ್ ಉದ್ದದ ಯು - ಗರ್ಡರ್ ಅಳವಡಿಸುವ ಮೂಲಕ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಹೊಸ ದಾಖಲೆ ಬರೆದಿದೆ.

ಚಿಕ್ಕಬಾಣಾವರ - ಯಶವಂತಪುರ ಮಾರ್ಗದಲ್ಲಿ ಹಾದುಹೋಗುವ ರೈಲಿನ ಸರಾಗ ಸಂಚಾರಕ್ಕಾಗಿ ದಟ್ಟಣೆ ಪ್ರದೇಶವಾದ ಯಶವಂತಪುರ ಸಮೀಪ ಈ ಯು - ಗರ್ಡರ್ ಅನ್ನು ಮಂಗಳವಾರ ಸಂಜೆ ಯಶಸ್ವಿಯಾಗಿ ಅಳವಡಿಸಲಾಗಿದೆ. ಈ ಮೂಲಕ 31 ಮೀ. (100 ಅಡಿ) ಉದ್ದದ ಗರ್ಡರ್ ಜೋಡಿಸುವಲ್ಲಿ ಸಂಸ್ಥೆಯ ಪ್ರಯತ್ನ ದೇಶದಲ್ಲೇ ಮೊದಲ ಪ್ರಯತ್ನವಾಗಿದೆ. ಈವರೆಗೆ ದೇಶದ ಯಾವ ನಗರದಲ್ಲು ಇಷ್ಟು ಉದ್ದದ ಯು - ಗರ್ಡರ್ ಅಳವಡಿಸಿಲ್ಲ. ಎತ್ತರಿಸಿದ ಮಾರ್ಗದಲ್ಲಿ ಹಾದುಹೋಗುವ ರೈಲು ಸರಾಗ ಸಂಚಾರಕ್ಕಾಗಿ ಕಾಂಕ್ರೀಟ್ ಬಾಕ್ಸ್ ಮಾದರಿಯೊಳಗೆ ಹಳಿಗಳನ್ನು ಹಾಕಲಾಗುತ್ತದೆ.

ಉದ್ದೇಶಿತ ಮಾರ್ಗದಲ್ಲಿ ರಸ್ತೆ ಹಾದುಹೋಗಿರುವ ಕಾರಣ ಅಲ್ಲಿ ಸಾಮಾನ್ಯ ಪಿಲ್ಲರ್ ಹಾಕಲು ಸಾಧ್ಯವಿರಲಿಲ್ಲ. ಹಾಗಾಗಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಲವು ಬಾರಿ ಸ್ಥಳಪರಿಶೀಲನೆ ಮಾಡಿ ಅತಿ ಕ್ಲಿಷ್ಟ ಕಾಮಗಾರಿಗೆ ಒಪ್ಪಿಗೆ ನೀಡಿದ್ದರು. ಈ ಗರ್ಡರ್‌ಅನ್ನು 550 ಟನ್ ಹಾಗೂ 700 ಟನ್ ಸಾಮರ್ಥ್ಯದ ಕ್ರೇನ್‌ಗಳನ್ನು ಬಳಸಿಕೊಂಡು ಜೋಡಿಸಲಾಗಿದೆ. ಜತೆಗೆ ಗರ್ಡರ್ ರಚನೆ ಸಿದ್ಧಪಡಿಸುವ ವೇಳೆ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯೊಂದಿಗೆ ಗುಣಮಟ್ಟ ಪರೀಕ್ಷಿಸಿದ ಬಳಿಕವೇ ಶೇ.100 ಖಾತ್ರಿಯೊಂದಿಗೆ ಗರ್ಡರ್ ರಚನೆಯನ್ನು ಅಳವಡಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉಪನಗರ ರೈಲು ಯೋಜನೆಯ ಮಲ್ಲಿಗೆ ಮಾರ್ಗದಲ್ಲಿ ದೇಶದಲ್ಲೇ ಅತಿ ಉದ್ದವಾದ ಯು - ಗರ್ಡರ್ ಅನ್ನು ಯಶವಂತಪುರ ಸಮೀಪ ಯಶಸ್ವಿಯಾಗಿ ಅಳವಡಿಸಲಾಗಿದೆ. ಈ ಐತಿಹಾಸಿಕ ಸಾಧನೆಯನ್ನು ಸಾಧ್ಯವಾಗಿಸಿದ ಕೆ-ರೈಡ್‌ನ ಎಲ್ಲ ಅಧಿಕಾರಿಗಳು, ಇಂಜಿನಿಯರ್‌ಗಳು, ಸಿಬ್ಬಂದಿ/ಕಾರ್ಮಿಕ ವರ್ಗಕ್ಕೆ ಅಭಿನಂದನೆಗಳು.

- ಎಂ.ಬಿ.ಪಾಟೀಲ್, ಮೂಲಸೌಕರ್ಯ ಇಲಾಖಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net