ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಡಾ.ಮಂಜುನಾಥ್ ಪರ ಮೈತ್ರಿ ಪಕ್ಷಗಳ ಒಲವು

Dr C N Manjunath
Published on

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿರುವಂತೆಯೇ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಮುಖಂಡರ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪ್ರಮುಖ ಮುಖಂಡರ ಸಭೆ ಕರೆದಿದ್ದರು. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಸೇರಿ ಕ್ಷೇತ್ರದ ಅನೇಕ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಎಲ್ಲ ಮುಖಂಡರ ಅಭಿಪ್ರಾಯ ಆಲಿಸಿದ ಕುಮಾರಸ್ವಾಮಿ, ನಮ್ಮ ಕಾರ್ಯಕರ್ತರು, ಮುಖಂಡರು ಪಕ್ಷದ ಹಿತರಕ್ಷಣೆ ಬಗ್ಗೆ ಆತಂಕಪಡಬೇಕಾಗಿಲ್ಲ. ಕಹಿಯನ್ನು ಮರೆತು ಕೆಲಸ ಮಾಡೋಣ. ಹಿಂದೆ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಂಡು ಮುಂದೆ ಹೋಗೋಣ ಎಂದರು.

ಡಾ.ಮಂಜುನಾಥ್ ಪರ ಒಲವು

ಜಯದೇವ ಹೃದ್ರೋಗ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನೇ ಬೆಂಗಳೂರು ಗ್ರಾಮಾಂತರ ನಿಲ್ಲಿಸಬೇಕು ಎಂಬುದು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರ ಒತ್ತಾಸೆ ಇದೆ. ನಮ್ಮ ಪಕ್ಷದ ನಾಯಕರು, ಮುಖಂಡರು ಅದೇ ಅಭಿಲಾಷೆ ಹೊಂದಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಒಮ್ಮತ ಅಭ್ಯರ್ಥಿ ಆಗಬೇಕು ಎರಡೂ ಪಕ್ಷಗಳೂ ಬಯಸಿವೆ. ಅವರು ಚುನಾವಣೆಗೆ ನಿಲ್ಲಬೇಕೋ ಬೇಡವೋ ಎನ್ನುವ ತೀರ್ಮಾನವನ್ನು ಮುಖಂಡರಾದ ನಿಮಗೆ ಬಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಯೋಗೇಶ್ವರ್ ಸಮ್ಮತಿಯೂ ಇದೆ

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಎನ್‌ಡಿಎ ಅಭ್ಯರ್ಥಿ ಆಗಬೇಕು ಎಂದು ನಾನು ಹೇಳಿದ್ದೇನೆ. ಸ್ವತಃ ಯೋಗೇಶ್ವರ್ ಅವರಿಗೂ ಹೇಳಿದ್ದೇನೆ. ಆದರೆ, ಯೋಗೇಶ್ವರ್ ಅವರು ಕೂಡ ಡಾ.ಮಂಜುನಾಥ್ ಅವರೇ ನಿಲ್ಲಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಮಿತ್ರ ಪಕ್ಷದ ವರಿಷ್ಠರು, ರಾಜ್ಯದ ಬಿಜೆಪಿ ನಾಯಕರ ಭಾವನೆಗಳನ್ನು ನಾವು ಗೌರವಿಸಬೇಕಿದೆ ಎಂದು ಕುಮಾರಸ್ವಾಮಿ ಸಭೆಯ ಗಮನಕ್ಕೆ ತಂದರು.

ನನ್ನ ಸಹೋದರಿ ಕಣ್ಣೀರು ಹಾಕುತ್ತಿದ್ದಾರೆ

ನಮ್ಮ ತಂದೆಯವರ ಜತೆ ಭಾನುವಾರ ಎರಡು ಗಂಟೆ ಕಾಲ ಚರ್ಚೆ ಮಾಡಿದೆ. ಡಾ.ಮಂಜುನಾಥ್ ಅವರ ಸ್ಪರ್ಧೆ ವಿಚಾರವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನನ್ನ ಸಹೋದರಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ನಮ್ಮನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತೀರಿ, ನೆಮ್ಮದಿಯಿಂದ ಇದ್ದೇವೆ. ನಮಗೆ ರಾಜಕೀಯ ಬೇಡ ಎಂದು ಅಳುತ್ತಾ ಕೂತಿದ್ದಾರೆ. ಇದು ನಮ್ಮ ಮನೆಯ ಪರಿಸ್ಥಿತಿ. ನನ್ನ ನೋವು ನನಗೇ ಗೊತ್ತು. ಆದರೆ ಆ ಕಿರಾತಕರನ್ನು ಮಣಿಸಲೇಬೇಕು. ಇದು ನನ್ನ ಗುರಿ ಪರೋಕ್ಷವಾಗಿ ಡಿ.ಕೆ. ಬ್ರದರ್ಸ್ ವಿರುದ್ಧ ಕಿಡಿಕಾರಿದರು.

ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ. ರಾಮನಗರ ಜನರು ನಿಖಿಲ್ ರನ್ನು ಸೋಲಿಸಿದ್ದಾರೆ ಎಂದು ನಾನು ದೋಷ ಕೊಡುವುದಿಲ್ಲ. ನಮ್ಮದೇ ತಪ್ಪುಗಳಿಂದ ನಿಖಿಲ್ ಸೋತಿದ್ದಾರೆ. ಆ ತಪ್ಪುಗಳನ್ನು ಸರಿ ಮಾಡೋಣ ಎಂದರು.

ಡಿಕೆಶಿ ವಿರುದ್ಧ ಕಿಡಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಣ್ಣೀರು ಹಾಕೋದು ಅವರ ಕುಟುಂಬಕ್ಕೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಅವರಿಗೆ ಆತ್ಮಸಾಕ್ಷಿ ಇದೆಯಾ? ಎಂದು ಕಿಡಿಕಾರಿದ ಕುಮಾರಸ್ವಾಮಿ, ಅವರು ಏನೆಲ್ಲ ಮಾಡಿದ್ದಾರೆ, ಏನೆಲ್ಲಾ ಕೆಡುಕು ಮಾಡಿದ್ದಾರೆ ಎನ್ನುವುದು ಈ ರಾಜ್ಯಕ್ಕೆ ಗೊತ್ತಿದೆ. ನಾವು ಹಾಗೆ ಮಾಡಿದ್ದೇವೆಯಾ? ಖಂಡಿತಾ ಇಲ್ಲ ಎಂದು ಹೇಳಿದರು.

ಮಾಗಡಿ ಬಾಲಕೃಷ್ಣಗೆ ತಿರುಗೇಟು

ಗೌಡರ ಮನೆಯಲ್ಲಿ ಅಳಿಯನನ್ನೇ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಮಾಗಡಿ ನಾಯಕರು ಹೇಳಿದ್ದಾರೆ. ಆ ವ್ಯಕ್ತಿಗೆ ಸತ್ಯ ಗೊತ್ತಿಲ್ಲ. ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನು ನಾವು ಹರಕೆಯ ಕುರಿ ಮಾಡುತ್ತಿಲ್ಲ. ಎಲ್ಲರೂ ಅವರ ನಿಸ್ವಾರ್ಥ ಸೇವೆ ಗುರುತಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಾಗಡಿ ಶಾಸಕ ಬಾಲಕೃಷ್ಣಗೆ ತಿರುಗೇಟು ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net