ಸೆರೆಮನೆಯೋ? ಅರಮನೆಯೋ? ; ದುಷ್ಟರ ಕೂಟ, ಭ್ರಷ್ಟರ ಆಟ, ಸಿಬ್ಬಂದಿಗೆ ಪ್ರಾಣಸಂಕಟ

sdfsdaf
Published on

| ಹರ್ಷವರ್ಧನ್​ ಬ್ಯಾಡನೂರು

ಅಪರಾಧಿಗಳಿಗೆ ಮನ: ಪರಿವರ್ತನೆಯಾಗಲಿ, ಉತ್ತಮ ವ್ಯಕ್ತಿಗಳಾಗಿ ಹೊರಬರಲಿ ಎಂದು ಜೈಲು ಶಿಕ್ಷೆ ನೀಡಲಾಗುತ್ತದೆ. ಆದರೆ, ಜೈಲೇ ಅಂತಹ ಕೈದಿಗಳ ಕ್ರಿಮಿನಲ್​ ಯೂನಿವರ್ಸಿಟಿಯಾದರೆ? ಉತ್ತಮ ವ್ಯಕ್ತಿಗಳಾಗುವುದಿರಲಿ, ಇನ್ನಷ್ಟು ಅಪರಾಧ ಚಟುವಟಿಕೆಗಳಿಗೆ ದಾರಿಯಾದರೆ? ಜೈಲೂ ಕೂಡ ಅಪರಾಧಿಗಳಿಗೆ ಯಾವುದೋ ಸಂಬಂಧಿ ಮನೆಯಂತಾದರೆ? ಜೈಲಿಗೆ ಹೋಗಿ ಬರುವುದೇ ಜಾಲಿ ಟ್ರಿಪ್​ನಂತಾದರೆ? ಶಿಕ್ಷೆ, ಜೈಲಿನ ಉದ್ದೇಶವೇ ಬದಲಾಗಿಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗ್ರಹದಲ್ಲಿ ನಡೆಯುತ್ತಿರುವ ಟನೆಗಳು ಅಂತಹ ಪ್ರಶ್ನೆ ಮೂಡಿಸಿವೆ. ಅಲ್ಲೇ ಕೆಲಸ ಮಾಡಿರುವ, ಮಾಡುತ್ತಿರುವ ಹೆಸರು ಹೇಳಲಿಚ್ಛಿಸದ ಕೆಲ ಸಿಬ್ಬಂದಿಗಳು ಸೆಂಟ್ರಲ್​ ಜೈಲಿನ ಕರಾಳ ಮುಖವನ್ನು ವಿಜಯವಾಣಿ ಬಳಿ ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ.

ಜೈಲಿನಲ್ಲಿ ಬಡ್ಡಿ ವ್ಯವಹಾರ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿ 5200ಕ್ಕೂ ಅಧಿಕ ಸಜಾ ಕೈದಿಗಳು, ಮಹಿಳಾ ಕೈದಿಗಳು ಮತ್ತು ವಿಚಾರಣಾಧೀನ ಕೈದಿಗಳಿದ್ದಾರೆ. ವಿಐಪಿ, ಶ್ರೀಮಂತ ಕೈದಿಗಳೂ ಇದ್ದಾರೆ. ಹೊಸದಾಗಿ ಜೈಲಿಗೆ ಬರುವ ವಿಚಾರಣಾ ಕೈದಿಗಳು ಮತ್ತು ಸಜಾ ಕೈದಿಗಳಿಗೆ ಅಲ್ಲಿನ ಸಿಬ್ಬಂದಿ ಮತ್ತು ಹಲವು ವರ್ಷಗಳಿಂದ ನೆಲೆಯೂರಿರುವ ಸಜಾ ಕೈದಿಗಳೇ ಬಡ್ಡಿಗೆ ಹಣ ನೀಡುತ್ತಾರೆ. 500 ರೂ.ಗೆ ವಾರಕ್ಕೆ 1000 ರೂ. ಕೊಡಬೇಕು ಎರಡು ವಾರ ಕಳೆದರೆ 2000 ರೂ., ತಿಂಗಳಾದರೆ 3000 ರೂ. ರೂ ಕೊಡಬೇಕು ಎಂದು ತಾಕೀತು ಮಾಡುತ್ತಾರೆ. ಹಾಗೇ ಹೊಸ ಕೈದಿಗಳ ಹಿನ್ನೆಲೆ ತಿಳಿದುಕೊಂಡು ಕೆಲ ರೌಡಿಗಳು ತಮ್ಮ ಕೊಠಡಿಗೆ ಅವರನ್ನು ಹಾಕಿಸಿಕೊಂಡು, ಅವರ ಊಟ, ತಿಂಡಿ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ನಂತರ ಅವರ ಮನೆಗೆ ಫೋನ್​ ಮಾಡಿಸಿ ಹಣಕ್ಕೆ ಒತ್ತಡ ಹಾಕುತ್ತಾರೆ. ಹೀಗೆ ಹಾರ್ಡ್​ಕೋರ್​ ಕ್ರಿಮಿನಲ್​ಗಳ ಕಪಿಮುಷ್ಠಿಯಲ್ಲಿರುವ ಜೈಲಿನಲ್ಲಿ ಎಲ್ಲ ರೀತಿಯ ದಂಧೆಗಳೂ ನಡೆಯುತ್ತಿವೆ. ಅದಕ್ಕೆ ಸಾಕ್ಷಿ ಎಂಬಂತೆ ಆಗೊಮ್ಮೆ ಈಗೊಮ್ಮೆ ನಡೆಯುವ ರೇಡ್​ಗಳಲ್ಲಿ ಗಾಂಜಾ, ಮೊಬೈಲ್​, ಹಣ, ಡ್ಯಾಗರ್​, ಚಾಕು ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೂ ಅದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಇಕ್ಕಟ್ಟಿನಲ್ಲೇ, ಒಗ್ಗಟ್ಟು!
4146 ಕೈದಿಗಳ ಸಾಮರ್ಥ್ಯವಿರುವ ಜೈಲಿನಲ್ಲಿ 5200ಕ್ಕೂ ಹೆಚ್ಚು ಕೈದಿಗಳಿದ್ದು, 400ಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಮೂರು ಶಿಫ್ಟ್​ಗಳಲ್ಲಿ ಸಿಬ್ಬಂದಿ ಕೆಲಸ ಮಾಡುವ ಕಾರಣ, ಯಾವ ಮೂಲೆಯಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾಯಿಡುವುದು ಕಷ್ಟ. ಹೀಗೆ ಸಿಬ್ಬಂದಿ ಇಕ್ಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದರೆ, ಕೈದಿಗಳು ಒಗ್ಗಟ್ಟಿನಿಂದ ತಮ್ಮ ಆಟಾಟೋಪ ಮುಂದುವರಿಸುತ್ತಾರೆ. ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಹಣವಿದೆ. ಲಂಚ ಕೊಟ್ಟು ಇಲ್ಲಿಗೆ ಟ್ರಾನ್ಸ್​ರ್​ ಮಾಡಿಸಿಕೊಳ್ಳುವವರೂ ಇದ್ದಾರೆ. ಕೈದಿಗಳಿಗೆ ಸವಲತ್ತುಗಳನ್ನು ಕೊಟ್ಟು ಹಣ ಗಳಿಸುತ್ತಾರೆ. ಕೆಲ ಸಿಬ್ಬಂದಿ, ಅಧಿಕಾರಿಗಳು ದಕ್ಷರಾಗಿದ್ದರೂ ಕೆಲ ಭ್ರಷ್ಟರಿಂದಾಗಿ ಇಡೀ ಜೈಲು ವ್ಯವಸ್ಥೆ ತಲೆತಗ್ಗಿಸುವಂತಾಗಿದೆ ಎಂದು ಸಿಬ್ಬಂದಿ ಆರೋಪಿಸುತ್ತಾರೆ.

ಎಲ್ಲೆಲ್ಲೂ ಲಂಚಾವತಾರ
ಜೈಲಿನ ಕ್ಯಾಂಟೀನ್​ನಲ್ಲಿ ಇಂಥದ್ದೇ ತಿಂಡಿ, ವಸ್ತುಗಳನ್ನು ಮಾರಬೇಕು ಎಂಬ ಪಿನ್​ ಕಾರ್ಡ್​ ಮೆನು ಇದೆ. ಆದರೆ, ಅದರಲ್ಲಿ ಹೆಚ್ಚು ಲಾಭವಿಲ್ಲ. ಹೀಗಾಗಿ ಪಿನ್​ ಕಾರ್ಡ್​ನಲ್ಲಿ ಇಲ್ಲದ ಹಲವು ಉತ್ಪನ್ನಗಳನ್ನು ಜೈಲಿನಲ್ಲಿ ಮಾರಲಾಗುತ್ತದೆ. 10 ರೂ. ವಸ್ತು 200 ರೂ.ಗೆ, 60 ರೂ. ಅಡಿಗೆ ಎಣ್ಣೆ 500ರಿಂದ 600 ರೂ.ಗೆ ಮಾರಲಾಗುತ್ತದೆ. ಮೊದಲು ವಾರ್ಡನ್​, ಹೆಡ್​ ವಾರ್ಡನ್​ ಕ್ಯಾಂಟೀನ್​ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪ್ರತಿ ಆರು ತಿಂಗಳಿಗೊಮ್ಮೆ ಅವರು ಬದಲಾಗುತ್ತಿದ್ದರು. ಆದರೆ, ಯಾವಾಗ ಅಲ್ಲಿ ಹಣವಿದೆ ಎಂಬುದು ತಿಳಿಯಿತೋ ಕೆಲ ವರ್ಷಗಳಿಂದ ಜೈಲು ಅಧಿಕಾರಿಗಳೇ ಆ ಕ್ಯಾಂಟೀನ್​ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈಗ ಪ್ರತಿ ಎರಡು ತಿಂಗಳಿಗೆ ಕ್ಯಾಂಟೀನ್​ ಇನ್​ಚಾರ್ಜ್​ ಬದಲಾಗುತ್ತಾರೆ. ಐದು ಸಾವಿರ ಕೈದಿಗಳಿಗೆ ಒಂದೇ ಕ್ಯಾಂಟೀನ್​. ಪ್ರತಿದಿನ ಲಾಂತರ ರೂ. ವ್ಯಾಪಾರ ನಡೆಯುತ್ತದೆ. ವಿಐಪಿ ಕೈದಿಗಳಿಗೆ ಸೆಪರೇಟ್​ ಐಟಂಗಳು ಬರುತ್ತವೆ. ಬೀಡಿ, ಸಿಗರೇಟ್​ ಕ್ಯಾಂಟೀನ್​ನಲ್ಲಿ ಮಾರುತ್ತಾರೆ. ಕೆಲ ವರ್ಷಗಳ ಹಿಂದೆ ಬೀಡಿ, ಸಿಗರೇಟ್​ ಮಾರಾಟ ನಿಲ್ಲಿಸುವ ಯತ್ನ ಮಾಡಲಾಗಿತ್ತಾದರೂ, ಮೂರೇ ದಿನಗಳಲ್ಲಿ ಕೈದಿಗಳು ಜೈಲಿನಲ್ಲಿ ಗಲಾಟೆ ಪ್ರಾರಂಭಿಸಿದ ಕಾರಣ, ಮತ್ತೆ ಮಾರಾಟ ಪ್ರಾರಂಭಿಸಿದ್ದಾರೆ ಎಂದು ಮಾಹಿತಿ ನೀಡುತ್ತಾರೆ.

ಎಂಟ್ರಿಯಿಂದಲೇ ಆಟ ಪ್ರಾರಂಭ
ಹೊಸ ಕೈದಿ ಜೈಲಿನ ಒಳಗೆ ಬರುತ್ತಲೇ ಹಣಕ್ಕಾಗಿ ಒಳಗಿರುವವರು ಬಾಯಿ ಬಿಡುತ್ತಾರೆ. ಆತನಿಗೆ ಒಳ್ಳೆ ರೂಮ್​ ಕೊಡಬೇಕು ಅಂದರೆ ಸಿಬ್ಬಂದಿ, ಅಧಿಕಾರಿಗೆ ಒಂದು ಸಾವಿರ ರೂ. ಲಂಚ ಕೊಡಬೇಕು. ಇಲ್ಲದಿದ್ದರೆ ಟಾಯ್ಲೆಟ್​ ತೊಳೆಸುವುದು, ಹಾರ್ಡ್​ಕೋರ್​ ಕ್ರಿಮಿನಲ್​ಗಳಿರುವ ರೂಮ್​ ಆತನಿಗೆ ಫಿಕ್ಸ್​.

ಜೈಲೇ ಮನೆ, ಜೈಲೇ ಮನ
ಗ್ಯಾಂಗ್​ ಡ್ಯೂಟಿ, ಕ್ಲೀನಿಂಗ್​, ಫ್ಯಾಕ್ಟರಿ, ಕಾರ್ಪೆಂಟರ್​ ಕೆಲಸ ಮಾಡುವವರಿಗೆ ದಿನಕ್ಕೆ 550 ರೂ. ಸಂಬಳ ಫಿಕ್ಸ್​ ಮಾಡಲಾಗಿದೆ. ಈ ಕೆಲಸ ಮಾಡುವ ಎಷ್ಟೋ ಜನ ಸಜಾ ಕೈದಿಗಳು ಹೊರಗೆ ಹೋಗಲು ಇಷ್ಟಪಡುವುದಿಲ್ಲ. ಹೊರಗೆ ಬಂದು ಕೆಲಸವಿಲ್ಲ, ಇಲ್ಲೇ ಇರುತ್ತೇವೆ ಎನ್ನುವ ಕೈದಿಗಳೂ ಇದ್ದಾರೆ. ಕೆಲ ಸಜಾ ಕೈದಿಗಳು ಅಲ್ಲಿದ್ದುಕೊಂಡೇ ಹಣ ಗಳಿಸಿ, ಮನೆಗೂ ಕಳುಹಿಸುತ್ತಾರೆ. ವರ್ಷಕ್ಕೊಮ್ಮೆ, ಎರಡು ಬಾರಿ ಪೆರೋಲ್​ ಮೇಲೆ ಹೊರಗೆ ಹೋಗಿ ಮಜಾ ಮಾಡುತ್ತಾರೆ.

ಅಡುಗೆಮನೆಯಲ್ಲಿ ಝಣ ಝಣ ಕಾಂಚಾಣ
ಜೈಲೂಟ ಯಾರಿಂದಲೂ ತಿನ್ನಲು ಸಾಧ್ಯವಿಲ್ಲ ಎಂಬ ಮಾತಿದೆ. ಅದಕ್ಕೆ ಕಾರಣ 5200 ಕೈದಿಗಳಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆಂದು ಚಪಾತಿ, ಮುದ್ದೆ, ಅನ್ನ, ಸಾಂಬಾರು, ಚಿತ್ರಾನ್ನ, ಉಪ್ಪಿಟ್ಟು ಅಂತ ಮೆನು ಇದೆ. ಆದರೆ, 60 ಕೆಜಿ ಬೇಳೆಯ ಬದಲು 30 ಕೆಜಿ ಬೇಳೆ ಬಳಸಿ ಅಡುಗೆ ಮಾಡಿದರೆ, ಹೇಗೆ ರುಚಿಸಲು ಸಾಧ್ಯ? ದಿನಸಿ, ಕಾಳು, ಬೇಳೆ, ಎಣ್ಣೆ ಕೈದಿಗಳಿಗೆ ಮತ್ತು ಹೊರಗೆ ಮಾರುತ್ತಾರೆ. ತಮ್ಮ ರೂಮಿನಲ್ಲೇ ಸ್ಟವ್​ ಇಟ್ಟುಕೊಂಡು, ಜೈಲು ಊಟವನ್ನು ತೆಗೆದುಕೊಂಡು ಹೋಗಿ ಮಸಾಲೆ ಹಾಕಿಕೊಂಡು ತಿನ್ನುವ ಕೈದಿಗಳೂ ಇದ್ದಾರೆ. ಅಡುಗೆ ಟೆಂಡರ್​, ತರಕಾರಿ ಕಮಿಷನ್​, ಕ್ಯಾಂಟೀನ್​ ಉಸ್ತುವಾರಿ ಕಮಿಷನ್​, ಇಷ್ಟು ತಿಂಗಳಿಗೊಮ್ಮೆ ಪ್ಲೇಟ್​, ಲೋಟ, ತಟ್ಟೆ, ಬ್ಲೇಡ್​, ಸೋಪ್​, ಪೇಸ್ಟ್​, ಬ್ರಷ್​, ದಿಂಬು, ಹಾಸಿಗೆ, ಬೆಡ್​ಶೀಟ್​ನಿಂದ ಹಿಡಿದು ಪ್ರತಿಯೊಂದು ವಸ್ತುವಿಗೂ ಕಮಿಷನ್​ ಹೋಗುತ್ತದೆ.

ದರ್ಶನ್​ ಫೋಟೋ ಹಿಂದಿನ ಸತ್ಯ
ಕೆಲ ದಿನಗಳಿಂದ ನಟ ದರ್ಶನ್​, ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನ್​ ಜತೆ ಕುಳಿತಿರುವ ಫೋಟೋ ವೈರಲ್​ ಆಗಿರುವುದು ಗೊತ್ತಿದೆ. ಅಲ್ಲಿನ ಸಿಬ್ಬಂದಿ ಹೇಳುವ ಪ್ರಕಾರ ಸೆಕ್ಯುರಿಟಿ ಸೆಲ್​ ಸಮೀಪದ, ಕ್ವಾರಂಟೀನ್​ ರೂಮ್​ನ ಹಿಂದಿನ ಜಾಗವದು. ಪ್ರತಿದಿನ ಸಂಜೆ ಕೆಲ ಸಮಯ ಕೈದಿಗಳಿಗೆ ಅಲ್ಲಿ ವಾಕಿಂಗ್​ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕ್ವಾರಂಟೀನ್​ ರೂಮಿನಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಕೈದಿಗಳು ಕೋರ್ಟ್​ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಚೇರುಗಳ ವ್ಯವಸ್ಥೆಯಿದೆ. ಅದೇ ಚೇರುಗಳನ್ನು ಹೊರಗೆ ತಂದು ದರ್ಶನ್​ ಮತ್ತು ತಂಡ ಕುಳಿತಿದ್ದಾರೆ. ಹೈ ಸೆಕ್ಯೂರಿಟಿ ಸೆಲ್​ಗಳಿಂದ ಫೋಟೋ ತೆಗೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಾರೆ. ವಿಲ್ಸನ್​ ಗಾರ್ಡನ್​ ನಾಗನೇ ದರ್ಶನ್​ನ ನೋಡಿಕೊಳ್ಳುತ್ತಿದ್ದಾನೆ. ಹೆಸರಿಗಷ್ಟೇ ದರ್ಶನ್​ ಮನೆಯೂಟಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೆ ಏನು ಬೇಕೋ ಎಲ್ಲ ಒಳಗೆ ಮಾಡಿಕೊಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ದರ್ಶನ್​ ಅಂತಲ್ಲ ಪ್ರತಿಯೊಬ್ಬ ವಿಐಪಿಗೂ ಈ ವಿಶೇಷ ಸೇವೆ ದೊರೆಯುತ್ತದೆ ಎಂದು ಆರೋಪಿಸುತ್ತಾರೆ. ವಿಚಾರಣಾ ಕೈದಿಗೆ ವಾರಕ್ಕೆ ಒಮ್ಮೆ ಸಂದರ್ಶನ, ಸಜಾ ಕೈದಿಗೆ 15 ದಿನಕ್ಕೊಮ್ಮೆ ಸಂದರ್ಶನ, ಜೈಲಿನ ಮ್ಯಾನುಯಲ್​ನಲ್ಲಿದೆ. ಆದರೆ, ದರ್ಶನ್​ ಭೇಟಿಗೆ ಪ್ರತಿದಿನ ಯಾರಾದರೂ ಒಬ್ಬರು ಬರುತ್ತಲೇ ಇರುತ್ತಾರೆ. ದರ್ಶನ್​ 40 ಲಕ್ಷ ರೂ. ತರಿಸಿ ಅಡುಗೆಮನೆ ಮತ್ತು ಕೆಲ ಅಧಿಕಾರಿಗಳಿಗೆ ಹಂಚಿದ್ದಾನೆ ಎಂಬ ವಿಷಯ ಕೆಲ ದಿನಗಳಿಂದ ಜೈಲಿನಲ್ಲಿ ಹರಿದಾಡುತ್ತಿದೆ.

ಕೈದಿಗಳ ತಂಟೆಗೆ ಹೋಗದ ಅಧಿಕಾರಿಗಳು
ಹೀಗೆ ಜೈಲಿನ ಅಧಿಕಾರಿಗಳೇ ಕೈದಿಗಳ ಜತೆ ಶಾಮೀಲಾಗಿರುವ ಕಾರಣ, ಅವರು ಕೈದಿಗಳ ತಂಟೆಗೆ ಹೋಗುವುದಿಲ್ಲ. ಬದಲಾಗಿ ಏನೇ ಸಮಸ್ಯೆ ಆದರೂ ಸಿಬ್ಬಂದಿಗೆ ಶಿೆ ನಿಡಲಾಗುತ್ತದೆ. ರೌಡಿಗಳನ್ನು ಎದುರು ಹಾಕಿಕೊಂಡು ಕೆಲಸ ಮಾಡುವುದು ಕಷ್ಟ. ಕೊಟ್ಟಷ್ಟು ಹಣ ತೆಗೆದುಕೊಂಡು ಅವರ ಪಾಡಿಗೆ ಅವರು ಇರಲು ಬಿಟ್ಟುಬಿಡುತ್ತಾರೆ. ಸಜಾ ಕೈದಿಗಳು ಕೆಲವೊಮ್ಮೆ ಸಿಬ್ಬಂದಿಯ, ಅಧಿಕಾರಿಗಳ ವೀಕ್​ನೆಸ್​ ಹಿಡಿದುಕೊಂಡು ಆಟವಾಡುತ್ತಾರೆ. ಸೆಪರೇಟ್​ ಸೆಲ್​ ಬೇಕು ಅಂದರೆ ವಾರಕ್ಕಿಷ್ಟು ಹಣ ಕೊಡಲೇಬೇಕು. ಜೈಲು ಶಿೆ ಅನುಭವಿಸುತ್ತಿರುವ ಕೆಲ ಹಾರ್ಡ್​ಕೋರ್​ ಕ್ರಿಮಿನಲ್​ಗಳು ಪೆನ್​ ಕ್ಯಾಮರಾಗಳಲ್ಲಿ ಲಂಚ ಕೊಡುವಾಗ ರೆಕಾರ್ಡ್​ ಮಾಡಿಕೊಂಡು ಅಧಿಕಾರಿಗಳನ್ನೇ ಆಟ ಆಡಿಸುವವರೂ ಇದ್ದಾರೆ ಎನ್ನುತ್ತಾರೆ. ಒಂದು ಸೆಲ್​ ಒಬ್ಬ ರೌಡಿಯ ಉಸ್ತುವಾರಿ ಇರುತ್ತಾರೆ. ಮೂರರಿಂದ ನಾಲ್ಕು ಜನ ಇರುತ್ತಾರೆ. ವಾರಕ್ಕೆ ಅಥವಾ ತಿಂಗಳಿಗೆ ಹ್ತಾ ಹೋಗುತ್ತದೆ. ಅಧಿಕಾರಿಗಳಿಗೆ ಬಾಡಿಗೆ ರೂಪದಲ್ಲಿ ಹಣ ಕೊಡುತ್ತಾರೆ. ಹಣ ಕೊಡದಿದ್ದರೆ ರೂಮ್​ ಬದಲಿಸುತ್ತಾರೆ.

ವೈದ್ಯಕಿಯ ಸಿಬ್ಬಂದಿಯೂ ಭಾಗಿ
ಕರೊನಾ ಸಮಯದಲ್ಲಿ ಹಗರಣವೊಂದರಲ್ಲಿ ಬಂಧಿತನಾಗಿ ಬೆಂಗಳೂರು ಸೆಂಟ್ರಲ್​ ಜೈಲು ಸೇರಿದ್ದ ವೈದ್ಯರೊಬ್ಬರು, ಕೆಲ ತಿಂಗಳಿನಿಂದ ಇದೇ ಜೈಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಚೇಂಬರ್​ಗೆ ದರ್ಶನ್​ ಮತ್ತು ಪವಿತ್ರಾ ಗೌಡರನ್ನು ಕರೆಸಿಕೊಂಡು ಮೊಬೈಲ್​ ಕೊಟ್ಟು ಮಾತನಾಡಿಸಿದ್ದಾರೆ. ಗಾಂಜಾ, ಸಲ್ಯೂಷನ್​, ಡ್ರಗ್ಸ್​ ಕೂಡ ಅಲ್ಲಿಂದಲೇ ಸರಬರಾಜಾಗುತ್ತದೆ. ಜೈಲಿಗೆ ವೈದ್ಯರು ತುಂಬ ಮುಖ್ಯ. ಪ್ರತಿದಿನ ಕೈದಿಗಳ ಊಟ ಅವರೇ ಪರಿಶೀಲಿಸುತ್ತಾರೆ. ಅವರನ್ನು ಎದುರು ಹಾಕಿಕೊಂಡರೆ ಸಮಸ್ಯೆ ಅಂತ ಅಧಿಕಾರಿಗಳು ಅವರನ್ನು, ಅವರ ಬ್ಯಾಗ್​, ವಾಹನ ಯಾವುದನ್ನೂ ಚೆಕ್​ ಮಾಡುವುದಿಲ್ಲ. ಸಮಯ ಮೀರಿದ ಔಷಧಗಳು ಕೂಡ ದೊರಕಿವೆ. ಕೆಲ ಕೈದಿಗಳಿಗೂ ಆರೋಗ್ಯ ಸಮಸ್ಯೆ ಉಂಟಾಗಿದ್ದ ಪ್ರಕರಣಗಳೂ ನಡೆದುಹೋಗಿವೆ ಎಂದು ಆರೋಪಿಸುತ್ತಾರೆ ಅಲ್ಲಿನ ಸಿಬ್ಬಂದಿ.

ಪರಿಹಾರವೇನು?
ದಶಕದ ಹಿಂದೆಯೇ ಸಜಾ ಕೈದಿಗಳಿಗೆ, ವಿಚಾರಣಾಧೀನ ಕೈದಿಗಳು ಮತ್ತು ಮಹಿಳಾ ಕೈದಿಗಳಿಗೆಂದೇ ಮೂರು ಜೈಲುಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ, ಹಾಗಾದರೆ ಬರುವ ಹಣಕ್ಕೆ ಕತ್ತರಿ ಬೀಳುತ್ತದೆ ಎಂಬ ಕಾರಣಕ್ಕೆ ಅಧಿಕಾರಿಗಳೇ ಮನಸ್ಸು ತೋರಿಸುತ್ತಿಲ್ಲ ಎಂಬ ಆರೋಪ ಸಿಬ್ಬಂದಿಯದ್ದು. ವಿಚಾರಣಾಧೀನ ಕೈದಿಗಳ ಸಂಪರ್ಕ ಸಿಗುತ್ತಿರುವುದರಿಂದಲೇ ಸಜಾ ಕೈದಿಗಳು ಜೈಲಿನಲ್ಲಿದ್ದುಕೊಂಡೇ ತಮ್ಮ ಆಟ ಮುಂದುವರಿಸಿದ್ದಾರೆ. ಹಾಗೇ ಕೆಲ ತಪ್ಪು ಮಾಡದ ವಿಚಾರಣಾಧೀನ ಕೈದಿಗಳು ಅದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಭ್ರಷ್ಟ ಅಧಿಕಾರಿಗಳು, ದುಷ್ಟ ಕೈದಿಗಳ ಆಟ ನಿಲ್ಲಬೇಕೆಂದರೆ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು, ಮೂರು ಜೈಲುಗಳಾಗಿ ವಿಂಗಡಣೆ ಆಗಲೇಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಿಬ್ಬಂದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net