

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ವೇದಿಕೆ (ಐಎಲ್‌ವೈಎಫ್) ಆಶ್ರಯದಲ್ಲಿ ಜನವರಿ ೨೦ ರಿಂದ ೨೨ ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯತ ಜಾಗತಿಕ ವ್ಯವಹಾರ ಶೃಂಗಸಭೆ ಆಯೋಜಿಸಲಾಗಿದೆ ಎಂದು ವೇದಿಕೆ ಸಂಸ್ಥಾಪಕ ಅವಿನಾಶ್ ಪಾಳೇಗಾರ್ ಹೇಳಿದ್ದಾರೆ.
ವೀರಶೈವ ಲಿಂಗಾಯತರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಒಟ್ಟುಗೂಡಿಸುವ ಉದ್ದೇಶದಿಂದ ೨೦೧೩ರಲ್ಲಿ ಈ ಸಂಸ್ಥೆ ಆರಂಭವಾಗಿತ್ತು. ದಶಮಾನೋತ್ಸವ ಅಂಗವಾಗಿ ಸಮಾಜದ ಉದ್ದಿಮೆದಾರರ ಶೃಂಗಸಭೆ ಆಯೋಜಿಸಲಾಗಿದೆ. ಜನವರಿ ೨೦ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೩ ದಿನ ನಡೆಯುವ ಶೃಂಗಸಭೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ, ತಯಾರಿಕಾ ಕ್ಷೇತ್ರ, ನವೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಪ್ರತ್ಯೇಕ ವಲಯಗಳಿವೆ. ಉದ್ಯೋಗ ಮೇಳ, ಉದ್ದಿಮೆಗೆ ಸಂಬಂಧಿಸಿದಂತೆ ಉಪನ್ಯಾಸ, ಕಾರ್ಯಾಗಾರ ನಡೆಯಲಿವೆ. ಭಾಗವಹಿಸುವಿಕೆ ಸಂಪೂರ್ಣ ಉಚಿತವಾಗಿದ್ದು, ಎಲ್ಲ ವರ್ಗ, ಜಾತಿಯ ಯುವಜನರು ಭಾಗವಹಿಸಬಹುದು. ಶೃಂಗಸಭೆಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದರು.
ಜಗತ್ತಿನಾದ್ಯಂತ ಇರುವ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು ಒಂದೇ ಸೂರಿನಡಿ ತರುವುದು ಮತ್ತು ಕರ್ನಾಟಕದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಲಾಗುವುದು. ರಾಜ್ಯ ಸರ್ಕಾರ ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ವ್ಯಾಪಾರ, ರೈತ ಸಮುದಾಯವನ್ನು ಉತ್ತೇಜಿಸಲಾಗುವುದೆಂದರು.
ಜಿಲ್ಲಾ ಮಟ್ಟದಲ್ಲಿ ನವೋದ್ಯಮ ಘಟಕ ಬಲಪಡಿಸುವುದು ಮತ್ತು ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ರಾಜ್ಯಾದ್ಯಂತ ರೈತ ಸಮುದಾಯವನ್ನು ತನ್ನ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರಗಳನ್ನು ಅನ್ವೇಷಿಸುವುದು ಈ ಶೃಂಗಸಭೆಯ ಉದ್ದೇಶ ಎಂದರು.
ಸಂಸ್ಥೆ ಸಂಸ್ಥಾಪಕ ಸಿದ್ದರಾಮ್ ಜತ್ತಿ, ಸಹ ಸಂಚಾಲಕ ಬಿಎಸ್. ಪ್ರಶಾಂತ್, ಮೈಸೂರು ವಿಭಾಗ ಅಧ್ಯಕ್ಷ ವೀರೇಶ, ಟ್ರಸ್ಟಿ ಪ್ರದೀಪ್ ಶಿವಶಂಕರ್, ಸದಸ್ಯ ಕುಮಾರ್ ಗೋಷ್ಠಿಯಲ್ಲಿದ್ದರು.