ಮೈಸೂರಿನಿಂದ ಮುರ್ಡೇಶ್ವರಕ್ಕಿನ್ನು ರೈಲು

Banglore-Train
Published on

ಕಾರವಾರ: ಬೆಂಗಳೂರು-ಮೈಸೂರು-ಮಂಗಳೂರು ನಡುವೆ ಓಡಾಡುತ್ತಿದ್ದ ರೈಲನ್ನು ಮುರುಡೇಶ್ವರವರೆಗೆ ವಿಸ್ತರಿಸಿ ಭಾರತೀಯ ರೈಲ್ವೆ ಆದೇಶ ಹೊರಡಿಸಿದೆ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ ಗಾಂವಕರ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕನ್ನಡ, ಕುಂದಾಪುರ ರೈಲ್ವೆ ಸೇವಾ ಸಮಿತಿ ಹಾಗೂ ಮೈಸೂರು ಸಂಸದ ಪ್ರತಾಪ ಸಿಂಹ ಅವರ ಪ್ರಯತ್ನಕ್ಕೆ‌ ಯಶಸ್ಸು ಸಿಕ್ಕಿದೆ ಎಂದಿದ್ದಾರೆ.

ರೈಲು 16585 ಪ್ರತೀ ನಿತ್ಯ ರಾತ್ರಿ ಎಂಟೂಕಾಲಿಗೆ ಬೈಯಪ್ಪನಹಳ್ಳಿ ಬಿಟ್ಟು ಒಂಬತ್ತಕ್ಕೆ ಮೆಜೆಸ್ಟಿಕ್ ತಲುಪಲಿದೆ‌. ಮಧ್ಯಾಹ್ನ 12 ರ ಸುಮಾರಿಗೆ ಮುರುಡೇಶ್ವರ ತಲುಪಲಿದೆ.

ಅದೇ ದಿನ ಮಧ್ಯಾಹ್ನ ಎರಡಕ್ಕೆ ಮುರುಡೇಶ್ವರ ದಿಂದ ಹೊರಟು, ಮರುದಿನ ಬೆಳಗ್ಗೆ ಆರಕ್ಕೆ ಬೆಂಗಳೂರಿಗೆ ತಲುಪಲಿದೆ ಎಂದಿದ್ದಾರೆ.

ಬೆಂಗಳೂರು-ಕಾರವಾರ ನಡುವೆ ಪ್ರತಿ ದಿನ ಓಡಾಡುವ ಪಂಚಗಂಗಾ ಎಕ್ಸ್ ಪ್ರೆಸ್ ಬೇಗನೇ ಹೊರಡುತ್ತದೆ. ಸೀಟು ಸಿಗದು ಎಂಬ ಆರೋಪವಿತ್ತು. ಅದೆಲ್ಲ ಸಮಸ್ಯೆಗಳೂ ಇನ್ನು ಬಗೆಹರಿಯಲಿವೆ. ಬೆಂಗಳೂರಿಗೆ ಉತ್ತರ ಕನ್ನಡದಿಂದ ಪ್ರತಿ ದಿನ ಎರಡು ರೈಲು ಆದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಕಳೆದ ಮೂರು ವರ್ಷಗಳ ಹಿಂದೆ ಕಳೆದು ಹೋದ ಉತ್ತರ ಕನ್ನಡ, ಮೈಸೂರು ಸಂಪರ್ಕ ಮರು ಸ್ಥಾಪನೆಯಾಗಿದೆ ಎಂದಿದ್ದಾರೆ. ಉತ್ತರ ಕನ್ನಡ ರೈಲ್ವೆ ಹೋರಾಟ ಸಮಿತಿಯ ಪರವಾಗಿ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಸಂಸದ ಪ್ರತಾಪ ಸಿಂಹ ಈ ಬಗ್ಗೆ ಮೂರು ವರ್ಷಗಳಿಂದ ಹೋರಾಟ ನಡೆಸಿದ್ದರು. ರೈಲ್ವೆ ಸಚಿವರನ್ನು ಭೇಟಿಯಾಗಿದ್ದರು ಎಂದು ರಾಜೀವ ಗಾಂವಕರ್‌ ವಿವರಿಸಿದ್ದಾರೆ.

.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net