ಟೋಲ್ ಶುಲ್ಕಕ್ಕೆ ವಿರೋಧದ ಬಿಸಿ: ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ

1 (8)
Published on

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಜು.1ರಿಂದ ಶುಲ್ಕ ನಿಗದಿ ಮಾಡಿರುವ ಸಂಬಂಧ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ವಿರೋಧದ ಬಿಸಿ ತಟ್ಟಿದೆ. ಈಗಾಗಲೇ ಹಲವು ಸಂಘಟನೆಗಳು ಶುಲ್ಕ ಸಂಗ್ರಹ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಅದರಂತೆ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪಿಡಬ್ಲ್ಯುಡಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ ಹಾಗೂ ರಮೇಶ ಬಂಡಿಸಿದ್ದೇಗೌಡ ಅವರು, ಶ್ರೀರಂಗಪಟ್ಟಣದಲ್ಲಿ ಟೋಲ್ ಶುಲ್ಕ ವಿಧಿಸಿರುವ ಸಂಬಂಧ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಇದಕ್ಕೆ ತಡೆ ನೀಡಬೇಕು. ಸರ್ವಿಸ್ ರಸ್ತೆಗಳು ಇನ್ನಿತರೆ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹ ಮಾಡದಂತೆ ತಡೆ ನೀಡಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಬೆಂಗಳೂರಿನಿಂದ ಅಥವಾ ಮೈಸೂರಿನಿಂದ ಹೊರಡಬೇಕಾದರೆ ಒಂದು ಬಾರಿ ಟೋಲ್ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗುತ್ತದೆ. ಈಗ ಶ್ರೀರಂಗಪಟ್ಟಣದಲ್ಲಿಯೂ ಟೋಲ್ ಕಟ್ಟಿಸಿಕೊಳ್ಳುತ್ತಿರುವುದು ಸಾರ್ವಜನಿಕರಿಗೆ ಡಬಲ್ ಹೊರೆಯಾಗಲಿದೆ. ಅಲ್ಲದೆ, ಇನ್ನೂ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಮನವಿ ಪತ್ರದಲ್ಲೇನಿದೆ?: ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯು ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿದೆ. ಇದರಿಂದ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಶೀಘ್ರ ಸಂಚಾರಕ್ಕೆ ಅನುಕೂಲವಾಗಿದೆ ಎಂಬ ಅಂಶ ಬಿಟ್ಟರೆ ಇದು ಜನರಿಗೆ ನಿಜಕ್ಕೂ ಜೇಬು ಸುಡುವ ರಹದಾರಿಯಾಗಿದೆ. ಈ ಮಾರ್ಗದಲ್ಲಿ ಜನರು ಟೋಲ್ ಕಟ್ಟಿ ಕಟ್ಟಿ ಬಸವಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗ ಇದ್ದದ್ದು ಸಾಲದೆಂಬಂತೆ ಶ್ರೀರಂಗಪಟ್ಟಣದಲ್ಲಿ ಸಹ ಜು.1ರಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ ಎಂದಿದ್ದಾರೆ.

ಉದ್ಘಾಟನೆಯಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಈ ರೀತಿಯ ಜನರಿಗೆ ಹೊರೆಯಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಅಲ್ಲದೆ, ಬೆಂಗಳೂರಿನಿಂದ ಮೈಸೂರಿಗೆ ಸ್ವಂತ ವಾಹನದಲ್ಲಿ ಹೋಗಿ ಬರಲು ಟೋಲ್ ಶುಲ್ಕವಾಗಿಯೇ 500 ರೂ ಕಟ್ಟಬೇಕೆಂದರೆ ನಿಜಕ್ಕೂ ಪ್ರಯಾಣ ಎಂಬುದು ದುಸ್ತರವಾಗಲಿದೆ. ಒಂದೆಡೆ ಆರಂಭಿಕ ಹಂತದಲ್ಲಿ ಟೋಲ್ ಶುಲ್ಕ ಬೀಳುತ್ತಿದೆ. ಇದನ್ನು ಜೂ.1ರಿಂದಲೇ ಜಾರಿಗೆ ಬರುವಂತೆ ಶೇ.22ರಷ್ಟು ಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಮೊದಲೇ ಬೆಲೆ ಏರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಇದೇ ಹೊರೆಯಂದು ಎಂದುಕೊಳ್ಳುತ್ತಿರಬೇಕಾದರೆ ಈಗ ಶ್ರೀರಂಗಪಟ್ಟಣದಲ್ಲಿಯೂ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ವಿವರಿಸಿದ್ದಾರೆ.

ಇನ್ನು ಇಲ್ಲಿ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆಯೆ? ಎಂಬುದನ್ನು ನೋಡುವುದಾದರೆ ಖಂಡಿತವಾಗಿಯೂ ಆಗಿಲ್ಲ. ಆಗಬೇಕಿರುವ ಕಾಮಗಾರಿಗಳು ಹತ್ತಾರು ಇವೆ. ಅವುಗಳು ಇನ್ನೂ ಕುಂಟುತ್ತಾ ಸಾಗಿವೆ. ಕೇಳಿದರೆ ಕುಂಟು ನೆಪಗಳನ್ನು ಹೇಳಲಾಗುತ್ತದೆ. ಆದರೆ, ಜನರಿಂದ ದುಡ್ಡು ಪಡೆಯಲು ಮಾತ್ರ ಇದಾವುದೂ ಲೆಕ್ಕಕ್ಕೆ ಬಾರದು ಎಂದರೆ ಹೇಗೆ?. ಮಂಡ್ಯ ತಾಲೂಕಿನ ಹನಕೆರೆ ಅಂಡರ್ ಪಾಸ್, ಹಳೇ ಬೂದನೂರು ಹಾಗೂ ಹೊಸ ಬೂದನೂರು ನಡುವಿನ ಸರ್ವಿಸ್ ರಸ್ತೆಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನು ಹಲವು ಕಡೆ ಸರ್ವಿಸ್ ರಸ್ತೆ ಕಾಮಗಾರಿ ಸಹ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಟೋಲ್ ಸಂಗ್ರಹ ಮಾಡುವುದು ಸರಿ ಅಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಡೆ ಖಂಡನಾರ್ಹವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿಗೆ ಕಾರು ಮತ್ತು ಜೀಪಿನಲ್ಲಿ ಹೋಗಿ ಬರಬೇಕೆಂದರೂ 500 ರೂ ಬೇಕು. ಅದೂ ಟೋಲ್ ಶುಲ್ಕ ಮಾತ್ರ. ಇದಲ್ಲದೆ ಪೆಟ್ರೋಲ್ ಚಾರ್ಜ್ ಸೇರಿದಂತೆ ಉಳಿದವು ಹೇಗೂ ಪ್ರತ್ಯೇಕವೇ ಆಗುತ್ತದೆ. ಅಂದರೆ, ಕಾರು/ಜೀಪುಗಳ ಏಕಮುಖ ಸಂಚಾರಕ್ಕೆ 320 ರೂ ಹಾಗೂ ದ್ವಿಮುಖ ಸಂಚಾರಕ್ಕೆ 485 ರೂ ನಿಗದಿ ಮಾಡಲಾಗಿದೆ. ಹೀಗೆ ಡಬಲ್ ಟೋಲ್ ಹೊರೆ ಪ್ರಯಾಣಿಕರ ಮೇಲಾಗಲಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಆದ್ದರಿಂದ ರಾಜ್ಯಸರ್ಕಾರ ಮಧ್ಯಪ್ರವೇಶ ಮಾಡಬೇಕು. ಅಲ್ಲದೆ, ಜನರಿಗೆ ಹೊರೆಯಾಗುತ್ತಿರುವ ಈ ನೂತನ ಟೋಲ್ ಸಂಗ್ರಹವನ್ನು ತಡೆಯಬೇಕು. ಸರ್ವಿಸ್ ರಸ್ತೆಗಳು ಸೇರಿದಂತೆ ಇನ್ನಿತರ ಕಾಮಗಾರಿ ಪೂರ್ಣವಾಗುವವರೆಗಾದರೂ ಟೋಲ್ ಸಂಗ್ರಹ ಮಾಡದಂತೆ ತಡೆಯೊಡ್ಡಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತಾವು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net