

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ಅಪಘಾತಗಳಾಗಿ ಸಾವು ನೋವಿನ ಪ್ರಮಾಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯ ಜನಪ್ರತಿನಿಧಿಗಳು ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ಅದರಂತೆ ಹೆದ್ದಾರಿ ಅಧ್ವಾನದ ಕುರಿತು ಪೂರ್ಣ ಮಾಹಿತಿ ಪಡೆದುಕೊಳ್ಳಲು ಹಿರಿಯ ತಜ್ಞರು ಹಾಗೂ ತಾಂತ್ರಿಕ ಸಮಿತಿ ರಚನೆ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸುಮಾರು ಹೊತ್ತು ಚರ್ಚೆ ನಡೆಸಲಾಗಿದೆ. ಜಿಲ್ಲೆಯ ಶಾಸಕರು, ಎಂಎಲ್‌ಸಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಲವು ವಿಷಯ ಪ್ರಸ್ತಾಪಿಸಿದ್ದಾರೆ. ಪ್ರಮುಖವಾಗಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚಾಗಿ ಮೃತಪಡುತ್ತಿರುವವ ಬಗ್ಗೆ ಕಳವಳ ವ್ಯಕ್ತವಾಗಿದೆ. ಇನ್ನು ದಿನವೂ ಅಪಘಾತವಾಗುತ್ತಿರುವುದರಿಂದ ಸಾವಿನ ಹೆದ್ದಾರಿ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತಿರುವುದರಿಂದ ತುರ್ತು ಕ್ರಮದ ಅವಶ್ಯಕತೆ ಇದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಆದ್ದರಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಮ್ಮ ಸಲಹೆ ನೀಡಿದ್ದಾರೆ. ಪ್ರಮುಖವಾಗಿ ಎಂಎಲ್‌ಸಿ ದಿನೇಶ್ ಗೂಳಿಗೌಡ, ತಜ್ಞರ ಸಮಿತಿ ರಚನೆಯ ಸಲಹೆ ನೀಡಿದ್ದಾರೆ. ಇದಕ್ಕೆ ಇತರರು ದನಿಗೂಡಿಸಿದ್ದಾರೆ.
ಸಮಿತಿ ರಚನೆಗೆ ನಿರ್ಧಾರ: ಬೆಂ-ಮೈ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನಲೆಯಲ್ಲಿ ರಸ್ತೆ ನಿರ್ಮಾಣ ದಲ್ಲಿರಬಹುದಾದ ಲೋಪ ಪರಿಶೀಲನೆಗೆ ಉನ್ನತ ಮಟ್ಟದ ತಜ್ಞರು ಹಾಗೂ ತಾಂತ್ರಿಕ ಸಮಿತಿಗಳನ್ನು ರಚಿಸಲು ಒಮ್ಮತದ ಸಲಹೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚನೆಗೆ ಕ್ರಮ ವಹಿಸಲಾಗಿದೆ.
ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿ ರಚನೆ ಮಾಡಲಾಗುತ್ತಿದೆ. ಬಳಿಕ ಹೆದ್ದಾರಿಯಲ್ಲಿ ಪರಿಶೀಲನೆ ನಡೆಸಿ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮತ್ತೊಂದು ಉನ್ನತ ಮಟ್ಟದ ಸಭೆಯನ್ನು ಕರೆಯುವಂತೆ ಮನವಿ ಸಲ್ಲಿಸಲಾಗುತ್ತಿದೆ. ಇದಾದ ನಂತರ ಕೂಲಂಕಷವಾಗಿ ಚರ್ಚೆ ನಡೆಸಿ ಕೇಂದ್ರ ಸಾರಿಗ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಮಾಹಿತಿ ನೀಡುವುದರ ಜತೆಗೆ ತ್ವರಿತವಾಗಿ ಅವುಗಳನ್ನು ಬಗೆಹರಿಸುವ ನಿರ್ಧಾರ ಮಾಡಲಾಯಿತು.
ಸಭೆಯಲ್ಲಿ ಕೇಳಿಬಂದ ಸಮಸ್ಯೆಗಳಿವು: ಕಾಮಗಾರಿಯು ವೈಜ್ಞಾನಿಕವಾಗಿ ಮಾಡಿಲ್ಲ. ಹಲವೆಡೆ ವಿದ್ಯುತ್ ದೀಪದ ವ್ಯವಸ್ಥೆ ಮಾಡಿಲ್ಲ. ಸಂಪರ್ಕ ರಸ್ತೆ ಅಭಿವೃದ್ಧಿ ಸಮರ್ಪಕವಾಗಿಲ್ಲ. ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಗಳ ಸೌಲಭ್ಯವಿಲ್ಲ. ಅವೈಜ್ಞಾನಿಕ ಬೈಪಾಸ್ ರಸ್ತೆ ನಿರ್ಮಿಸಿರುವುದು. ಸರಿಯಾಗಿ ಕೆಲಸ ಮಾಡದಿರುವುದು ಹೆದ್ದಾರಿಯಲ್ಲಿಯೇ ನೀರು ನಿಂತುಕೊಳ್ಳುತ್ತದೆ. ಪಾರ್ಕಿಂಗ್ ಸೌಲಭ್ಯವಿಲ್ಲ. ಶೌಚಗೃಹದ ವ್ಯವಸ್ಥೆ ಇಲ್ಲ. ದರೋಡೆ ಪ್ರಕರಣಗಳು ವರದಿಯಾಗುತ್ತಿರುವುದರಿಂದ ರಸ್ತೆಯಲ್ಲಿ ಜನರು ಓಡಾಡಲು ಭಯಪಡುವಂತ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮಧ್ಯೆ ನಿರ್ಮಿಸಿರುವ ವಿಭಜಕ ಕೇವಲ 225 ಸೆಂ.ಮೀ ಇದೆ. ಇದು ಕನಿಷ್ಟ 4 ಅಡಿ ಇದಿದ್ದರೆ ಎಷ್ಟೋ ಅಪಘಾತಗಳು ತಪ್ಪುತ್ತಿತ್ತು. ರಸ್ತೆಯಲ್ಲಿ ಮರಳು ಸಂಗ್ರಹವಾಗುವುದರಿಂದ ಸವಾರರಿಗೆ ತೊಂದರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೆಲ ತುರ್ತು ಕ್ರಮ ತೆಗೆದುಕೊಳ್ಳಬೇಕೆನ್ನುವ ಆಗ್ರಹ ಕೇಳಿಬಂದಿದೆ. ಅದರಂತೆ ಅಪಘಾತ ಹೆಚ್ಚಾಗಿ ನಡೆಯುತ್ತಿರುವ ಸ್ಥಳ ಹಾಗೂ ಕಾರಣದ ಮಾಹಿತಿ ಪಡೆಯುವುದು. ಸರಿಯಾದ ಸ್ಥಳದಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ನೀಡುವುದು. ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕಗಳ ಸ್ಥಳಾಂತರ ಮಾಡುವುದು. ಸರ್ವೀಸ್ ರಸ್ತೆ ಅಭಿವೃದ್ಧಿಪಡಿಸುವುದು. ಬಸ್ ಶೆಲ್ಟರ್ ನಿರ್ಮಾಣ ಮಾಡುವುದು. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸುವುದು. ಅಪಘಾತವಾದ ಸಂದರ್ಭದಲ್ಲಿ ಕೂಡಲೇ ಸ್ಪಂದಿಸಲು ಆಂಬುಲೆನ್ಸ್ ಸೌಲಭ್ಯ ಒದಗಿಸುವುದು. ಹೆದ್ದಾರಿ ಹಾಗೂ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ವಹಿಸುವುದು.
ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ಕೆ.ಎಂ.ಉದಯ್ ಕದಲೂರು, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿವೇಕ್ ಜಸ್ಟಿನ್ ಸೇರಿದಂತೆ ಹಲವರಿದ್ದರು.