

ಮಂಡ್ಯ: ಕೋಟ್ಯಂತರ ರೂ ಖರ್ಚು ಮಾಡಿದ್ದೇವೆನ್ನುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಯೇ ಸರಿಯಾಗಿಲ್ಲ, ಚರಂಡಿಗಳ ನಿರ್ಮಾಣವೂ ಅವೈಜ್ಞಾನಿಕ, ಬೇಡದ ಕಡೆಯೆಲ್ಲ ಡುಬ್ಬಗಳ ಹಾಕಿದ್ದಾರೆ, ಅವಶ್ಯಕತೆ ಇರುವ ಕಡೆ ನಿರ್ಲಕ್ಷ್ಯಿಸಿದ್ದಾರೆ, ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.
ಇದು ಬೆಂ-ಮೈ ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಪರಿಶೀಲನೆಗೆಂದು ಭೇಟಿ ನೀಡಿದಾಗ ಸಾರ್ವಜನಿಕರು, ವಾಹನ ಸವಾರರು ಸಮಸ್ಯೆಗಳ ಅನಾವರಣಗೊಳಿಸಿದರು.
ಜಿಲ್ಲಾ ವ್ಯಾಪ್ತಿಯ ಮದ್ದೂರು ತಾಲೂಕಿನ ನಿಡಘಟ್ಟದಿಂದ ಶ್ರೀರಂಗಪಟ್ಟಣ-ಮೈಸೂರು ಗಡಿಭಾಗದವರೆಗೂ ಪರಿಶೀಲಿಸಿದರು. ಅಪಘಾತ ವಲಯ ಹಾಗೂ ಸ್ಥಳಗಳಿಗೆ ತೆರಳಿ ಮಾಹಿತಿ ಪಡೆದು ಅಪಘಾತಕ್ಕೆ ಕಾರಣ, ಹೆದ್ದಾರಿಯ ಲೋಪದೋಷಗಳು, ನ್ಯೂನತೆ ಬಗ್ಗೆ ಸಾರ್ವಜನಿಕರಿಂದ ಹಾಗೂ ವಾಹನ ಸವಾರರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಅಲೋಕ್‌ಕುಮಾರ್ ಅವರನ್ನು ಭೇಟಿ ಮಾಡಿದ ಸಾರ್ವಜನಿಕರು, ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಸರ್ವೀಸ್ ರಸ್ತೆಯ ಪಕ್ಕದಲ್ಲಿಯೇ ಮಣ್ಣು, ಕಲ್ಲು ಹಾಕಿರುವುದರಿಂದ ವಾಹನ ಸವಾರರಿಗೆ ರಾತ್ರಿ ವೇಳೆ ತೊಂದರೆಯಾಗುತ್ತಿದೆ. ವೇಗ ನಿಯಂತ್ರಣ ಕುರಿತು ನಾಮಫಲಕಗಳ ಅಳವಡಿಸಿಲ್ಲ. ಹೆದ್ದಾರಿ ಪ್ರವೇಶ, ನಿರ್ಗಮನದ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲದಂತಾಗಿದೆ ಎಂದು ದೂರಿದರು.
ವಾಹನಗಳ ಸವಾರರಿಗೆ ಮಾಹಿತಿ ನೀಡಲು ಸಂಚಾರ ನಿಯಮ ಪಾಲನೆಗೆ ಫಲಕಗಳನ್ನು ಅಳವಡಿಸಿಲ್ಲ. ಲೈನ್‌ಕ್ರಾಸ್ ಮಾಡದಂತೆ ಸಂಚರಿಸುವ ಬಗ್ಗೆ ಅರಿವು ಮೂಡಿಸಿಲ್ಲ. ಅಪಘಾತವಾದರೆ ಮಾಹಿತಿ ನೀಡಲು ಸಹಾಯವಾಣಿ ಇಲ್ಲ. ತುರ್ತು ಆರೋಗ್ಯ ಸೇವೆ, ಅಪಘಾತವಾದ ವಾಹನಗಳ ಸ್ಥಳಾಂತರಕ್ಕೆ ಟೋಯಿಂಗ್, ಹೆದ್ದಾರಿ ಗಸ್ತು, ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದಂತಾಗಿದೆ. ಇದರ ಬಗ್ಗೆ ಹಲವಾರು ಬಾರಿ ದೂರು, ಮನವಿ ಮಾಡಿದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಲೋಕ್‌ಕುಮಾರ್ ಪ್ರತಿಕ್ರಿಯಿಸಿ, ಪ್ರಾಧಿಕಾರದ ಕೆಲ ತಪ್ಪುಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಜನರು ನಿಮ್ಮ ಜತೆಗೆ ಪೊಲೀಸ್ ಇಲಾಖೆಗೂ ಬೈಯ್ಯುತ್ತಾರೆ. ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು. ತಿರುವು ಇರುವ ಕಡೆ ನಾಮಫಲಕ ಹಾಕಬೇಕು. ಸರ್ವೀಸ್ ರಸ್ತೆಯಲ್ಲಿ ಲೋಪಗಳನ್ನು ಸರಿಪಡಿಸಿ. ಅಪಘಾತ ಪ್ರಕರಣಗಳನ್ನು ತಡೆಯುವುದು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪರಿಶೀಲನೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ತಿಮ್ಮಯ್ಯ, ಮದ್ದೂರು ವೃತ್ತ ನಿರೀಕ್ಷಕ ಅಯ್ಯನ್‌ಗೌಡ, ಪಿಎಸ್‌ಐ ಸಂತೋಷ್‌ಕುಮಾರ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಇತರರಿದ್ದರು.