

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರದ ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ, ನಿಗದಿಪಡಿಸಿರುವ ವೇಗಮಿತಿ ಮೀರಿದರೆ ಸ್ಥಳದಲ್ಲಿಯೇ ಆ ವಾಹನಗಳ ಫಾಸ್ಟ್ಯಾಗ್‌ನಿಂದ ದಂಡದ ಹಣ ಸರ್ಕಾರದ ಖಜಾನೆಗೆ ಪಾವತಿಯಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ.
ಬೆಂ-ಮೈ ಹೆದ್ದಾರಿಯಲ್ಲಿ ವಾಹನಗಳ ವೇಗದ ಮಿತಿಯನ್ನು 100 ಕಿ.ಮೀಗೆ ನಿಗದಿಗೊಳಿಸಲಾಗಿದೆ. ಈ ಸಂಬಂಧ ವಾಹನದ ರಿಯಲ್ ವೇಗದ ಮಾಹಿತಿ ಪಡೆಯಲು ನಗರದ ಹೊರವಲಯದಲ್ಲಿ ಮೂರು ಕ್ಯಾಮರಾದ ಜತೆಗೆ ಯಂತ್ರ ಅಳವಡಿಸಲಾಗಿದೆ. ಬೆಂಗಳೂರು ಕಡೆಯಿಂದ ಮೈಸೂರಿಗೆ ಹೋಗುವ ಮೂರು ಲೈನ್‌ಗಳಿಗೂ ಪ್ರತ್ಯೇಕ ಯಂತ್ರ ಹಾಕಲಾಗಿದೆ. ಅದರಂತೆ ಮೊದಲನೇ ಲೈನ್‌ನಲ್ಲಿ 60 ಕಿ.ಮೀ, ಎರಡನೇ ಲೈನ್‌ನಲ್ಲಿ 80 ಕಿ.ಮೀ ಹಾಗೂ 3ನೇ ಲೈನ್‌ಲ್ಲಿ 100 ಕಿ.ಮೀ ವೇಗದ ಮಿತಿ ನೀಡಲಾಗಿದೆ. ಈ ಮೂರು ಲೈನ್‌ನಲ್ಲಿ ಯಾವುದೇ ವಾಹನ ಬಂದರೂ ಅದರ ವೇಗ ಎಷ್ಟಿದೆ ಎನ್ನುವ ಮಾಹಿತಿ ಡಿಸ್‌ಪ್ಲೇ ಆಗುತ್ತಿದೆ. ಮಾತ್ರವಲ್ಲದೆ ನಿಯಮ ಉಲ್ಲಂಘಿಸಿದರೆ ವಾಹನದ ಫೋಟೋ ಟೋಲ್ ಫ್ಲಾಜಾ ಮೂಲಕ ಪೊಲೀಸರಿಗೆ ಸಿಗಲಿದೆ. ಬಳಿಕ ಅವರು ದಂಡ ವಸೂಲಿ ಮಾಡುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ದಂಡ ವಸೂಲಿ ಯೋಜನೆಗೆ ಇನ್ನಷ್ಟು ಹೊಸತನ ನೀಡಲಿದ್ದು, ಅದರಂತೆ ವೇಗಮಿತಿ ದಾಟುತ್ತಿದ್ದಂತೆ ವಾಹನದ ಫಾಸ್ಟ್ಯಾಗ್ ಮೂಲಕ ಕ್ಷಣಾರ್ಧದಲ್ಲಿ ದಂಡದ ಹಣ ಸರ್ಕಾರದ ಖಜಾನೆ-2ಕ್ಕೆ ಹೋಗುವಂತೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಚಿಂತನೆ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆಯಿಂದ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಲಿದೆ. ಇದನ್ನು ಅನುಷ್ಠಾನಗೊಳಿಸಿದರೆ ಪೊಲೀಸರಿಗೆ ಒಂದಷ್ಟು ಕಾರ್ಯಭಾರ ಕಡಿಮೆಯಾಗಲಿದೆ. ನಿಯಮ ಉಲ್ಲಂಘಿಸಿದ ಕ್ಷಣಾರ್ಧದಲ್ಲಿಯೇ ದಂಡದ ಹಣ ಪಾವತಿಯಾಗುವುದರಿಂದ ಟೋಲ್ ಫ್ಲಾಜಾ ಬಳಿ ಕಾಯಬೇಕಾದ ಪರಿಸ್ಥಿತಿ ಇರುವುದಿಲ್ಲ. ಜತೆಗೆ ರಾತ್ರಿ ಹೊತ್ತು ಕೂಡ ಸಿಬ್ಬಂದಿ ಇರಬೇಕಾಗುವಂತಿಲ್ಲ.
ಮಾತ್ರವಲ್ಲದೆ ಒನ್‌ವೇಯಲ್ಲಿ ಸಂಚಾರ ಮಾಡುವವರ ವಾಹನ ಫೋಟೋ ಕೂಡ ಪೊಲೀಸರಿಗೆ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಕೆಲ ಸವಾರರು ನಿಯಮ ಉಲ್ಲಂಘಿಸಿದ ವಾಹನದಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದರೆ ಹಾಗೂ ಸ್ಥಳೀಯವಾಗಿ ನೀಡಿರುವ ಎಂಟ್ರಿ, ಎಕ್ಸಿಟ್ ಮೂಲಕ ತಪ್ಪಿಸಿಕೊಂಡರೆ, ಅಂತಹ ವಾಹನದ ಸಂಖ್ಯೆ ಹಾಗೂ ಫೋಟೋವನ್ನು ಸ್ಥಳೀಯ ಪೊಲೀಸರಿಗೆ ತಲುಪಿಸುವ ವ್ಯವಸ್ಥೆಯಾಗುತ್ತಿದೆ. ಬಳಿಕ ವಾಹನಕ್ಕೆ ಸಂಬಂಧಿಸಿದವರ ವಿಳಾಸಕ್ಕೆ ಬಿಲ್ ಕಳುಹಿಸಿ ದಂಡ ವಸೂಲಿ ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.