

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದೆ.
ಬೆ-ಮೈ ಹೆದ್ದಾರಿಯಲ್ಲಿ ಮೂಲ ಸೌಲಭ್ಯವಿಲ್ಲ, ಹಲವೆಡೆ ಕಾಮಗಾರಿ ಅಪೂರ್ಣವಾಗಿದೆ. ಅವೈಜ್ಞಾನಿಕ ಕೆಲಸದಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಕೆಲವೆಡೆ ಶಾಶ್ವತ ಸಮಸ್ಯೆಗಳು ಸೃಷ್ಟಿಯಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿಯೂ ಕೋಟ್ಯಂತರ ರೂ ಅವ್ಯವಹಾರ ನಡೆದಿರುವ ಆರೋಪಗಳಿವೆ. ಆದ್ದರಿಂದ ಸಮಗ್ರ ತನಿಖೆ ನಡೆಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಯಾಗಿವೆ. ಜತೆಗೆ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಭೆಯಲ್ಲಿ ಮಾತನಾಡಿರುವ ಜಿಲ್ಲಾಧಿಕಾರಿ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಿಲ್ಲಾ ವ್ಯಾಪ್ತಿಯಲ್ಲಿ ಅಪೂರ್ಣ ಕಾಮಗಾರಿ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಶೀಘ್ರ ಕ್ರಮಕೈಗೊಳ್ಳಬೇಕು. ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಸಂಚಾರಕ್ಕೆ ಅನಾನುಕೂಲ ಉಂಟಾಗಿದ್ದು, ಜಿಲ್ಲೆಗೆ ಒಳಪಡುವ 55 ಕಿ.ಮೀ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಹಲವಾರು ಅಪಘಾತವಾಗಿ ಸಾವು ನೋವು ಸಂಭವಿಸಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದು ಸೂಚನೆ ನೀಡಿದ್ದಾರೆ.
ಪ್ರಮುಖವಾಗಿ ರಸ್ತೆಯ ಗುಣಮಟ್ಟ ಕಾಪಾಡಿಕೊಳ್ಳಬೇಕು. ರಸ್ತೆಯ ಆಗಮನ ಮತ್ತು ನಿರ್ಗಮನದಲ್ಲಿ ಸೂಚನಾ ಫಲಕ ಅಳವಡಿಸಬೇಕು. ಸರ್ವಿಸ್ ರಸ್ತೆಯ ಜಂಕ್ಷನ್‌ನಲ್ಲಿ ದೀಪ ಅಳವಡಿಸಿ, ಹೈವೇನಲ್ಲಿ ವೇಗ ಮಿತಿ ಪರೀಕ್ಷಾ ವಾಹನ ಒದಗಿಸಬೇಕು. ರಸ್ತೆಯ 2 ಬದಿಗಳಲ್ಲಿ ವಿದ್ಯುತ್ ಟವರ್ ಕಳ್ಳತನದ ಬಗ್ಗೆ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಸ್ತೆ ಬದಿಯ ಬೇಲಿಯನ್ನು ಕೆಲವರು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಬೇಲಿ ಇಲ್ಲದ ಪರಿಣಾಮ ಅಪಘಾತವಾಗುವ ಸಂಭವವಿರುತ್ತದೆ. ಆದ್ದರಿಂದ ಬೇಲಿ ಕಳ್ಳತನ ಮಾಡುವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಬೆಂ-ಮೈ ದಶಪಥ ರಸ್ತೆಗೆ ಒಳಪಡುವ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ತಾಲೂಕಿನ ಗ್ರಾಮಗಳಲ್ಲಿ ರಸ್ತೆ ಸುರಕ್ಷತಾ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್, ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳು ಎಲ್ಲೆಲ್ಲಿ ಗುಂಡಿ ಇರುತ್ತದೆಯೋ ಅಲ್ಲಿ ಗುಂಡಿ ಮುಚ್ಚಿ ಹಾಗೂ ರಸ್ತೆಯ ಅವ್ಯವಸ್ಥೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಿ.ಸಿ ಕ್ಯಾಮರಾ ಅಳವಡಿಸಿ ಸಂಚಾರ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಮಂಡ್ಯ ಸರ್ವಿಸ್ ರಸ್ತೆಯಿಂದ ಮದ್ದೂರಿನ ಮುಖ್ಯ ರಸ್ತೆಗೆ ಸೇರುವ ರಸ್ತೆಯಲ್ಲಿ ಡುಬ್ಬು ಇಲ್ಲ. ಇದರ ಪರಿಣಾಮ ಮುಖ್ಯ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ರಸ್ತೆ ಡುಬ್ಬ ನಿರ್ಮಾಣ ಮಾಡಿ ಅಲ್ಲಿನ ಅವ್ಯವಸ್ಥೆ ಸರಿಪಡಿಸಿ ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಎನ್.ಎಚ್.ಮೃತ್ಯುಂಜಯ, ರಾಜೇಂದ್ರಕುಮಾರ್, ಪ್ರಸಾದ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಜಿ.ಪಂ ಇಂಜಿನಿಯರ್ ಶಿವಚಂದ್ರು, ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್ ಇತರರಿದ್ದರು.