

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಅಂತೆಯೇ ಅವುಗಳನ್ನು ಬಗೆಹರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ಕೆಲಸಗಳು ಶೀಘ್ರ ಮುಗಿದರೆ ಅಪಘಾತಗಳನ್ನು ತಡೆಯಲು ಸಾಧ್ಯ ಎಂದು ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶೀಲನೆ ಮಾಡಿದಾಗ ಜನರು ತಮ್ಮ ಸಮಸ್ಯೆ ಹೇಳಿದ್ದಾರೆ. ಕೆಲವು ಕಡೆ ಸರ್ವೀಸ್ ರಸ್ತೆಯ ಫುಟ್‌ಪಾತ್ ಮಾಡಿಲ್ಲ. ಕೆಲ ಕಡೆ ಅಂಡರ್‌ಪಾಸ್ ಆಗಿಲ್ಲ. ಇನ್ನೂ ಕೆಲ ಕಡೆ ನೀರು ನುಗ್ಗುತ್ತಾ ಇದೆ. ಇದರಿಂದ ಅಪಘಾತಗಳು ಆಗುತ್ತಿವೆ. ಸರ್ವೀಸ್ ರಸ್ತೆಯಲ್ಲಿ ಫೆನ್ಸ್ ಸರಿಯಾಗಿ ಹಾಕಿಲ್ಲ. ಸರಿಯಾಗಿ ಕ್ಯಾಮೆರಾ ಅಳಡಿಕೆ ಆಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇವೆ. ಸಾರ್ವಜನಿಕರು ಸುರಕ್ಷಿತ ಚಾಲನೆಯನ್ನು ಮಾಡಬೇಕು. ಜನರು ಪ್ರತಿ ದಿನ ಸಾಯುತ್ತಾ ಇದ್ದಾರೆ. ಜನರು ಸಹ ಮುನ್ನೆಚ್ಚೆರಿಕಾ ಕ್ರಮ ತೆಗೆದುಕೊಳ್ಳಬೇಕು. ಹೆದ್ದಾರಿಯಲ್ಲಿ ಇನ್ನೂ ಬಹಳಷ್ಟು ಕೆಲಸಗಳು ಆಗಿಲ್ಲ. ಶೀಘ್ರ ಕೆಲಸ ಮಾಡಿ ಎಂದು ನಾವು ಒತ್ತಡ ಹಾಕುತ್ತಿದ್ದೇವೆ ಎಂದು ಹೇಳಿದರು.
ಹೆದ್ದಾರಿಯಲ್ಲಿ ಆಗುತ್ತಿರುವ ಅಪರಾಧಗಳನ್ನು ತಡೆಯಲು ಹೈವೇ ಪೆಟ್ರೋಲ್ ಹಾಕಿದ್ದೇವೆ. ಹೈವೇ ಪೆಟ್ರೋಲ್ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 4 ಹೈವೇ ಪೆಟ್ರೋಲ್ ಹಾಕಿದ್ದೇವೆ. ಕೆಟ್ಟು ನಿಂತ ಗಾಡಿಗಳ ಕಡೆ ಹೆಚ್ಚು ಗಮನಕೊಡಬೇಕು. ಬಹಳಷ್ಟು ಜನ ಸುಮ್ಮನೆ ಜೀವ ಕಳೆದು ಕೊಳ್ಳುತ್ತಾ ಇದ್ದಾರೆ. ಅಪಘಾತ ತಡೆಯಲು ಹೇಗೆ ಕ್ರಮ ತೆಗೆದುಕೊಳ್ಳಬೇಕೆಂದು ಗಮನ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಟೋಲ್ ಬಳಿ ವಾಹನಗಳ ತಪಾಸಣೆ ಮಾಡುತ್ತೇವೆ. ಯಾವ ವಾಹನಗಳಿಗೆ ಸರಿಯಾದ ಸ್ಟಿಕ್ಕರ್ ಇರಲ್ಲವೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅತಿಯಾದ ವೇಗದ ವಾಹನಗಳ ಮೇಲೆ ಕಣ್ಣಿಡುತ್ತೇವೆ. ವೇಗವಾಗಿ ಹೋದರೆ ದಂಡ ಹಾಕುವ ಜತೆಗೆ ಪರವಾನಗಿ ರದ್ದು ಮಾಡುತ್ತೇವೆ. ಸದ್ಯಕ್ಕೆ ಹೈವೇಯಲ್ಲಿ ದ್ವಿಚಕ್ರ ವಾಹನ ಓಡಾಡುತ್ತಿವೆ. ದ್ವಿಚಕ್ರ ವಾಹನ ರದ್ದಿಗೆ ಗೆಜೆಟ್ ನೋಟಿಫಿಕೇಷನ್ ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ 64 ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 58 ಜನರು ರಾಮನಗರ ವ್ಯಾಪ್ತಿಯಲ್ಲಿ ಮೃತರಾಗಿದ್ದಾರೆ. ಟೋಲ್ ಗೇಟ್ ಬಳಿ ಇನ್ನು ಮುಂದೆ ಡ್ರಿಂಕ್ ಆ್ಯಂಡ್ ಡ್ರೈವ್ ಪರೀಕ್ಷೆ ಮಾಡುತ್ತೇವೆ. ಜನರು ಅವರ ಸಮಸ್ಯೆಗಳನ್ನು ಹೇಳಿದ್ದಾರೆ. ಅಪಘಾತಗಳಿಗೆ ಅತಿಯಾದ ವೇಗ ಕಾರಣ. ಕಾರು, ಬೈಕಿನ ಚಾಲಕರು ಅತಿಯಾದ ಆತ್ಮವಿಶ್ವಾಸದಿಂದ ವಾಹನ ಚಲಾಯಿಸುತ್ತಾರೆ. ಬೈಕ್‌ನವರು 140ರ ವೇಗದಲ್ಲಿ ವಾಹನ ಚಲಿಸುತ್ತಾರೆ. ಮಧ್ಯದಲ್ಲಿ ಬ್ರೇಕ್ ಹಾಕಿದಾಗ ಅಪಘಾತಗಳು ಆಗುತ್ತವೆ. ಬಹಳಷ್ಟು ಜನರಿಗೆ ವಾಹನಗಳ ಮೇಲೆ ಕಂಟ್ರೋಲ್ ಇರಲ್ಲ. ಕಡಿಮೆ ವೇಗದಲ್ಲಿ ಹೋದರೆ ಏನೂ ಆಗಲ್ಲ. ಆರ್‌ಟಿಒ ಅವರು ನೈಪುಣ್ಯತೆ ಇರುವವರಿಗೆ ಪರವಾನಗಿ ಕೊಡಬೇಕು ಎಂದರು.