

ಕೊಪ್ಪಳ: ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯದ ರಾಜ್ಯ ಸರ್ಕಾರದ ನಡೆ ಖಂಡಿಸಿ ಬೆಂಗಳೂರಿನಲ್ಲಿ ಮಾ.28ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದೆ. ಆದರೆ, ನಮ್ಮ ಹೋರಾಟದಿಂದ ಶಾಸನಬದ್ಧವಾಗಿ ವಾಪಸ್ ಪಡೆದಿದೆ. ರಾಜ್ಯ ಸರ್ಕಾರ ಎಪಿಎಂಸಿ, ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಅವುಗಳನ್ನು ವಾಪಸ್ ಪಡೆಯುತ್ತಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬಂದಾಗಲೆಲ್ಲ ರೈತರ ಉದ್ಧಾರ ಮಾಡುವುದಾಗಿ ಹೇಳಿ, ವಿರೋಧಿ ನಡೆ ಅನುಸರಿಸುತ್ತಿವೆ. ಈಗಲ್‌ಟನ್ ರೆಸಾರ್ಟ್, ಜಿಂದಾಲ್‌ನಂಥ ಕಂಪನಿಗಳಿಗೆ ಸಾವಿರಾರು ಎಕರೆ ಸರ್ಕಾರಿ ಭೂಮಿ ನೀಡಲಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುತ್ತಿಲ್ಲ. ಕೂಡಲೇ ಅತಿಕ್ರಮವಾಗಿರುವ ಭೂ ಒತ್ತುವರಿ ತೆರವುಗೊಳಿಸಬೇಕೆಂದು ಆಹ್ರಹಿಸಿದರು.
ಈ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಾಮಾನ್ಯ ಹೋರಾಟಗಳನ್ನು ಕೈ ಬಿಟ್ಟು ರಾಜಕೀಯ ಹೋರಾಟ ಆರಂಭಿಸುತ್ತೇವೆ. ಚುನಾವಣೆಯಲ್ಲಿ ಸ್ಪರ್ಧಿಸಿ ರೈತ ವಿರೋಧಿ ಪಕ್ಷಗಳಿಗೆ ತಕ್ಕ ಬುದ್ಧಿ ಕಲಿಸುತ್ತೇವೆ. ಮಾ.28ಕ್ಕೆ ಬೆಂಗಳೂರಿನಲ್ಲಿ ಸಮಾವೇಶ ಹಮ್ಮಿಕೊಂಡು ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ರೈತ ಮುಖಂಡರಾದ ನಜೀರಸಾಬ್ ಮೂಲಮನಿ, ಹನುಮಂತಪ್ಪ ಹೊಳೆಯಾಚೆ, ಇಸ್ಮಾಯಿಲ್ ನಾಲಬಂದ್ ಇತರರಿದ್ದರು.