

ಬೆಂಗಳೂರು: ದೇಹ ಅರ್ಥ್ರೈಟಿಸ್ಗೆ ಒಳಗಾಗಿದ್ದರೂ ಲೆಕ್ಕಿಸದೆ ಕಾಶ್ಮೀರ ಪರ್ವತದೆತ್ತರದಲ್ಲಿರುವ 50 ಸರೋವರಗಳನ್ನು ಒಂದೇ ಋತುವಿನಲ್ಲಿ ಚಾರಣ ಮಾಡುವುದರ ಮೂಲಕ ದೇಶದ ಚಾರಣ ಕ್ಷೇತ್ರ ಹುಬ್ಬೇರುವಂತೆ ಮಾಡಿದ್ದಾರೆ.
ಸಮುದ್ರ ಮಟ್ಟದಿಂದ 10 ಸಾವಿರ ಅಡಿಗಿಂತಲೂ ಎತ್ತರದಲ್ಲಿರುವ ಸರೋವರಗಳನ್ನು ಅಲ್ಪೈನ್ ಸರೋವರಗಳು ಎನ್ನಲಾಗುತ್ತದೆ. ಅತ್ಯಂತ ದುರ್ಗಮವಾದ ಈ ದಾರಿಯಲ್ಲಿ ಸಾಗುವುದು ಕಷ್ಟಕರ. ಅದರಲ್ಲೂ ಒಂದೇ ಋತುವಿನಲ್ಲಿ ಬೆಂಗಳೂರಿನ ಬೆಳ್ಳಂದೂರು ನಿವಾಸಿ ನಮ್ರತಾ ನಂದೀಶ್ ಇದೀಗ ‘ಅಲ್ಪೈನ್ ಗರ್ಲ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಹುಶಃ ಈ ಸಾಧನೆ ಮಾಡಿದ ಮೊದಲ ಮಹಿಳೆ ನಮ್ರತಾ ಎನ್ನಲಾಗುತ್ತಿದೆ.
ನಮ್ರತಾ ಪತಿ ಅಭಿಷೇಕ್ ಶ್ರೀನಗರದಲ್ಲಿ ಚಳಿಗಾಲದಲ್ಲಿ ಹೆಪ್ಪುಗಟ್ಟಿದ ದಾಲ್ ಸರೋವರ ನೋಡುವ ಆಸೆ ವ್ಯಕ್ತಪಡಿಸಿದ್ದರು. ಈ ಕುರಿತು ಮಾಹಿತಿ ಹುಡುಕುತ್ತ ಸಾಗಿದಾಗ, ತಮಗೆ 33ನೇ ವರ್ಷವಾಗುತ್ತಿದ್ದು, 33 ಸರೋವರಗಳನ್ನು ವೀಕ್ಷಿಸುವ ಯೋಜನೆ ಹಾಕಿಕೊಂಡರು ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯಲ್ಲಿ ಎಚ್ಆರ್ ಅಧಿಕಾರಿಯಾಗಿರುವ ನಮ್ರತಾ. ಕೋವಿಡ್ ಕಾರಣಕ್ಕೆ ವರ್ಕ್ ಫ್ರಂ ಹೋಮ್ ಇದ್ದದ್ದೂ ಚಾರಣಕ್ಕೆ ತೆರಳಲು ಸಹಾಯವಾಯಿತು. ಎಲ್ಲ ತಯಾರಿ ಮಾಡಿಕೊಂಡು ದಕ್ಷಿಣ ಕಾಶ್ಮೀರದ ಪೀರ್ ಪಂಜಲ್ ಹಾಗೂ ಜಂಸ್ಕಾರ್ ಗಿರಿ ಶ್ರೇಣಿಗಳ ನಡುವಿನ ತೂಲಿಯನ್ ಸರೋವರದಿಂದ ಪ್ರಯಾಣ ಆರಂಭವಾಯಿತು.
ಅರ್ಥ್ರೈಟಿಸ್ ಸಮಸ್ಯೆ ಮೀರಿದ ಉತ್ಸಾಹ: ಚಾರಣಿಗರು ಸಾಮಾನ್ಯವಾಗಿ 3-4 ದಿನಗಳ ದೀರ್ಘ ಚಾರಣಕ್ಕೆ ಬೇಡಿಕೆ ಇಡುತ್ತಾರೆ. ಆದರೆ ನಮ್ರತಾ ಆಗಮಿಸುವ ಮೊದಲೇ ಗುರಿಯನ್ನು ಸ್ಪಷ್ಟಪಡಿಸಿಕೊಂಡೇ ಬಂದಿದ್ದರು. ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದೆಯೇ ಎಂದು ಕೇಳಿದಾಗ, ಮಂಡಿಯಲ್ಲಿ ಅರ್ಥ್ರೈಟಿಸ್ ಸಮಸ್ಯೆ ಇದೆ ಎಂದರು. ಗುರಿ ತಲುಪಲು ಅವರಲ್ಲಿದ್ದ ಬದ್ಧತೆಯನ್ನು ಕಂಡು ಅವರ ದೈಹಿಕ ಸಾಮರ್ಥ್ಯದ ಆಲೋಚನೆ ಇಲ್ಲವಾಯಿತು ಎಂದು ಚಾರಣ ತಂಡದ ನಾಯಕ ಸೈಯದ್ ತಾಹಿರ್ ಹೇಳುತ್ತಾರೆ.
ಚಾರಣಕ್ಕೆ ಕಾಶ್ಮೀರ ಹೇಳಿ ಮಾಡಿಸಿದ ಸ್ಥಳ. ಚಾರಣ ಮಾರ್ಗದರ್ಶನದಲ್ಲಿ ಹೆಚ್ಚೆಚ್ಚು ಮಹಿಳೆಯರನ್ನು ತೊಡಗಿಸಿದರೆ ಮತ್ತಷ್ಟು ಮಹಿಳೆಯರು ಚಾರಣದತ್ತ ಆಕರ್ಷಿತರಾಗುತ್ತಾರೆ. ಸ್ಥಳೀಯ ಮಹಿಳೆಯರಿಗೆ ಇದು ಪರ್ಯಾಯ ಉದ್ಯೋಗವೂ ಆಗಬಹುದು. | ನಮ್ರತಾ ನಂದೀಶ್