ಚಿನ್ನ ಖರೀದಿಯಿಂದ ಆರ್ಥಿಕ ಸಂಪತ್ತು ವೃದ್ಧಿ: ಟಿ.ಎ.ಶರವಣ ಅಭಿಮತ

Gold
Published on

ಬೆಂಗಳೂರು: ಶ್ರೀಮಂತಿಕೆಯ ಭಾಗವಾಗಿರುವ ಚಿನ್ನದ ಖರೀದಿಯಿಂದ ಆರ್ಥಿಕವಾಗಿ ಸದೃಢರಾಗಬಹುದು. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುವುದಿಲ್ಲ. ಹೀಗಾಗಿ ಇಂದು ನಾವು ಆಭರಣ ಖರೀದಿಸಿದರೆ, ಮುಂದಿನ ದಿನಗಳಲ್ಲಿ ಉತ್ತಮ ಲಾಭ ಸಿಗಲಿದೆ ಎಂದು ವಿಧಾನ ಪರಿಷತ್​ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ.

ಬೆಂಗಳೂರು ಜ್ಯುವೆಲರಿ ಅಸೋಸಿಯೇಷನ್​ ಅ.3ರಿಂದ ನ.16ರ ವರೆಗೆ ರಾಜ್ಯಾದ್ಯಂತ ಆಯೋಜಿಸಿರುವ 'ಗೋಲ್ಡ್​ ಶಾಪಿಂಗ್​ ಫೆಸ್ಟಿವಲ್​'ಗೆ ಜಯನಗರದ ವಿನಾಯಕ ಸ್ವಾಮಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸಂಪತ್ತು ಶೇಖರಣೆಗೆ ಚಿನ್ನ ಖರೀದಿ ಉತ್ತಮ ಆಯ್ಕೆ. ಕೊರೊನಾ ಲಾಕ್​ಡೌನ್​ ಅವಧಿಯಲ್ಲಿ ಬಂಗಾರ ಜನರ ಜೀವನ ರಣೆ ಮಾಡಿದೆ. ರಾಜ್ಯಾದ್ಯಂತ ಇರುವ ವಿವಿಧ ಅಭರಣ ಮಳಿಗೆಯಲ್ಲಿ ಚಿನ್ನ ಖರೀದಿ ಮಾಡಿದರೆ ಕೂಪನ್​ ನೀಡಲಾಗುತ್ತದೆ. ಬಳಿಕ ಲಕ್ಕಿ ಡ್ರಾ ನಲ್ಲಿ ವಿಜೇತ ಗ್ರಾಹಕರಿಗೆ ಚಿನ್ನ, ಬೆಳ್ಳಿ ಹಾಗೂ ಕಾರು ಬಹಮಾನ ನೀಡಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ಜ್ಯುವೆಲರಿ​ ಅಸೋಸಿಯೇಷನ್​ ಅಧ್ಯಕ್ಷ ಡಾ.ಚೇತನ್​ ಕುಮಾರ್​ ಮೆಹ್ತಾ ಮಾತನಾಡಿ, ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ಒಳಗೊಂಡಂತೆ 45 ದಿನಗಳ ಕಾಲ ಮೂರನೇ ಆವೃತ್ತಿಯ ಗೋಲ್ಡ್​ ಶಾಪಿಂಗ್​ ಫೆಸ್ಟಿವಲ್​ ನಡೆಯಲಿದೆ ಎಂದರು.

ಬಹುಮಾನಗಳ ಮೌಲ್ಯ 3 ಕೋಟಿ ರೂ.

ಫೆಸ್ಟಿವಲ್​ ಭಾಗವಾಗಿ ನೋಂದಣಿ, ಕೂಪನ್​ ನೀಡುವುದು ಮತ್ತು ಡ್ರಾ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್​ ರೂಪದಲ್ಲಿ ನಡೆಯಲಿದೆ. ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸಾರ್ಹತೆ ದೃಷ್ಟಿಯಿಂದ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆಯನ್ನು ಖಾತ್ರಿಪಡಿಸಲಾಗುತ್ತದೆ. 3.5 ಕೆ.ಜಿ ಚಿನ್ನ ಹಾಗೂ 100 ಕೆ.ಜಿ ಚಿನ್ನದ ಬಹುಮಾನ ಇರಲಿದೆ. ಬಹುಮಾನಗಳ ಮೌಲ್ಯ 3 ಕೋಟಿ ರೂ. ಹೊಂದಿದೆ. ಜತೆಗೆ ವಾರಾಂತ್ಯದ ಖರೀದಿಗೆ ಖಚಿತ ಬಹುಮಾನಗಳು ಇರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಬೆಂಗಳೂರು ಗೋಲ್ಡ್​ ಫೆಸ್ಟಿವಲ್​ನ ಮೊದಲ ಎರಡು ಆವೃತ್ತಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಕೊಡುಗೆಯನ್ನು ಈ ಬಾರಿ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಹೀಗಾಗಿ ಈ ಬಾರಿ ಹೆಚ್ಚಿನ ವಹಿವಾಟು ನಿರೀಸಲಾಗಿದೆ. ಮೂರನೇ ಆವೃತ್ತಿ ಹೆಚ್ಚಿನ ವೈಶಿಷ್ಟ$್ಯ ಮತ್ತು ಹಲಚು ಬಹುಮಾನಗಳನ್ನು ಹೊಂದಿದೆ. ಲಾಭಾಂಶದಲ್ಲಿ ಚಿನ್ನದ ಕುಶಲಕರ್ಮಿಗಳು ಮತ್ತು ಮಾರಾಟ ಸಿಬ್ಬಂದಿಯ ಮಕ್ಕಳಿಗೆ ವಿದ್ಯಾರ್ಥಿವೇತನ, ವ್ಯಾಪಾರ ಅಭಿವೃದ್ಧಿ ಚಟುವಟಿಕೆ ಬೆಂಬಲಿಸಲು ಬಳಸಲಾಗುತ್ತದೆ.

- ಸುರೇಶ್​ ಕುಮಾರ್​ ಗನ್ನಾ, ಅಧ್ಯಕ್ಷ, ಬೆಂಗಳೂರು ಗೋಲ್ಡ್​ ಫೆಸ್ಟಿವಲ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net