ಬೆಂಗಳೂರು ಸ್ವಲ್ಪ ಸೇಫ್: ಮುಂದಿನ ವಾರ ರಾಜಧಾನಿ ಸ್ಥಿತಿ ಬಹುತೇಕ ನಿಯಂತ್ರಣಕ್ಕೆ, ಹೊಸ ಪ್ರಕರಣಗಳ ಸಂಖ್ಯೆ 2000ಕ್ಕಿಂತ ತಗ್ಗುವ ನಿರೀಕ್ಷೆ..

Front
Published on

| ಪಂಕಜ ಕೆ.ಎಂ. ಬೆಂಗಳೂರು

ರಾಜ್ಯದಲ್ಲಿ ಆರೋಗ್ಯ ಎಮರ್ಜೆನ್ಸಿಗೆ ಕಾರಣವಾಗಿದ್ದ ಕರೊನಾ 2ನೇ ಅಲೆ ಅಬ್ಬರ ಕಳೆದೊಂದು ವಾರದಿಂದ ಇಳಿಮುಖವಾಗುತ್ತಿರುವುದು ತುಸು ಸಮಾಧಾನ ಮೂಡಿಸಿದೆ. ಪ್ರಕರಣಗಳ ಸಂಖ್ಯೆ ಇದೇ ರೀತಿ ತಗ್ಗಿದರೆ ಮುಂದಿನ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2000ಕ್ಕಿಂತ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ದೇಶದಲ್ಲಿ ದೈನಿಕ ಸೋಂಕಿನ ಪ್ರಮಾಣವೂ ಇಳಿಕೆಯಾಗುತ್ತಿದ್ದು, ಮಂಗಳವಾರ 2 ಲಕ್ಷಕ್ಕಿಂತ ಕಡಿಮೆ ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಲ್ಲಿ ಮಾರ್ಚ್​ನ ಇಡೀ ತಿಂಗಳಲ್ಲಿ 31,886 ಪ್ರಕರಣ ವರದಿಯಾಗಿ 147 ಮಂದಿ ಮೃತಪಟ್ಟಿದ್ದರು. ಆದರೆ, ಏಪ್ರಿಲ್​ನಲ್ಲಿ ಸೋಂಕು ಮಿತಿಮೀರಿ 3,38,360 ಕೇಸ್ ದೃಢಪಟ್ಟು, ಸಾವಿನ ಸಂಖ್ಯೆ 1,907ಕ್ಕೆ ತಲುಪಿತ್ತು. ಸೋಂಕಿನ ನಾಗಾಲೋಟ ಮೇ ತಿಂಗಳಲ್ಲೂ ಮುಂದುವರಿದು 24ರವರೆಗೆ 3,49,160 ಪ್ರಕರಣ ವರದಿಯಾಗಿ 4,976 ಮಂದಿ ಕೊನೆಯುಸಿರೆಳೆದಿದ್ದಾರೆ. ಸೋಂಕು ಏಕಾಏಕಿ ತೀವ್ರ ಸ್ವರೂಪ ಪಡೆದುಕೊಂಡ ಪರಿಣಾಮ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ, ಆಕ್ಸಿಜನ್ ಕೊರತೆ ಎದುರಾಗಿ ಮನೆ, ರಸ್ತೆ, ಆಸ್ಪತ್ರೆಗಳ ಬಾಗಿಲಲ್ಲಿ ರೋಗಿಗಳು ಸಾವನ್ನಪ್ಪಿದ ಭೀಕರತೆಗೂ ರಾಜ್ಯ ಸಾಕ್ಷಿಯಾಯಿತು.

ಬೆಂಗಳೂರಲ್ಲಿ ಮೇ ಆರಂಭದಲ್ಲಿ ದೈನಿಕ 21 ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿತ್ತು. ಆದರೀಗ ಹೊಸ ಕೇಸ್​ಗಳ ಸಂಖ್ಯೆ 5-6 ಸಾವಿರಕ್ಕೆ ಇಳಿಕೆಯಾಗಿದ್ದು, ಸೋಂಕಿನ ವೇಗ ತಗ್ಗಿ ಭಯದ ವಾತಾವರಣ ಕಡಿಮೆಯಾಗುತ್ತಿದೆ. ಮಂಗಳವಾರ ರಾಜಧಾನಿಯಲ್ಲಿ 6,243 ಹೊಸ ಪ್ರಕರಣ ಪತ್ತೆಯಾಗಿದ್ದರೆ, 13,210 ಮಂದಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇನ್ನೊಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಲಿದೆ. ಮಂಗಳವಾರ 350 ಜನ ಮೃತಪಟ್ಟಿದ್ದು, ಸಾವಿನ ಪ್ರಮಾಣ ಸಹ ನಿಧಾನವಾಗಿ ಕಡಿಮೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಶೇ.70 ಜನರ ಸ್ಥಿತಿ ಗಂಭೀರ: ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 7,550 ಕೋವಿಡ್ ಸೋಂಕಿತರಲ್ಲಿ 5,258 (ಶೇ. 70) ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪ್ರತಿ 10 ಮಂದಿ ಸೋಂಕಿತರಲ್ಲಿ 7 ಮಂದಿ ಸ್ಥಿತಿ ಗಂಭೀರವಾಗುತ್ತಿದೆ. ಇದಕ್ಕೆ ಕಾರಣ ಸೂಕ್ತ ಸಮಯದಲ್ಲಿ ಹಾಸಿಗೆ ಸಿಗದೆ ಇರುವುದು ಹಾಗೂ ಮನೆ ಆರೈಕೆಯಲ್ಲಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರುತ್ತಿರುವುದು. ಇದರಿಂದ ಸೋಂಕು ಇಳಿಕೆಯಾದರೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಸೋಮವಾರ ಒಂದೇ ದಿನ ಗಂಭೀರ ಸ್ಥಿತಿಯಲ್ಲಿದ್ದ 5,701 ಸೋಂಕಿತರಲ್ಲಿ 297 ಮಂದಿ ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಹೆಚ್ಚು ಕೇಸ್?: ಬೆಂಗಳೂರಿನಲ್ಲಿ 6,243, ಮೈಸೂರು 2,241, ತುಮಕೂರು 1,312, ಹಾಸನ 1,285, ಬೆಳಗಾವಿಯಲ್ಲಿ 1,260 ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ 24 ಗಂಟೆಯಲ್ಲಿ 22,758 ಸೋಂಕು ಪ್ರಕರಣಗಳು ವರದಿಯಾಗಿವೆ.

1.07 ಲಕ್ಷ ಪರೀಕ್ಷೆ: ರಾಜ್ಯದಲ್ಲಿ ಮಂಗಳವಾರ 26,266 ರ್ಯಾಪಿಡ್ ಆಂಟಿಜಿನ್ ಟೆಸ್ಟ್ ಮತ್ತು 81,409 ಆರ್​ಟಿಪಿಸಿಆರ್ ಪರೀಕ್ಷೆ ಸೇರಿ ಒಟ್ಟು 1,07,675 ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಸೋಂಕು ತಗ್ಗಲು ಕಾರಣವೇನು?
  • ಪರಿಸ್ಥಿತಿ ನಿಯಂತ್ರಿಸಲು ಏ. 23ರಿಂದ ಮೇ 10ರವರೆಗೆ ಜನತಾ ಕರ್ಫ್ಯೂ ಜಾರಿ
  • ಮೇ 11 ರಿಂದ 23ರವರೆಗೆ ಲಾಕ್ ಡೌನ್ ಘೋಷಣೆ
  • ಜನ ಸಂಚಾರ, ವಾಹನಗಳ ಓಡಾಟ ಕಡಿಮೆಯಾಗಿ ಸೋಂಕು ಹರಡುವ ಚೈನ್ ಕಡಿತ
  • ಸಾವಿರಾರು ಸಂಖ್ಯೆಯಲ್ಲಿ ಜನರು ಬೆಂಗಳೂರು ತೊರೆದು ಹಳ್ಳಿಗಳ ಕಡೆ ಮುಖ ಮಾಡಿದ್ದು
  • ತುರ್ತು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲವನ್ನು ಬಂದ್ ಮಾಡಿದ್ದು
  • ಸೋಂಕು ಲಕ್ಷಣ ಹೊಂದಿದವರು, ಸೋಂಕಿತರ ಪ್ರಾಥಮಿಕ/ದ್ವಿತೀಯ ಸಂರ್ಪತರ ಪತ್ತೆ

ದೇಶದಲ್ಲೂ ದಾಖಲೆ ಇಳಿಕೆ: ದೇಶಾದ್ಯಂತ ದೈನಿಕ ಹೊಸ ಕೋವಿಡ್ ಪ್ರಕರಣ 2 ಲಕ್ಷದೊಳಕ್ಕೆ ಇಳಿದಿದ್ದು, 1.96 ಲಕ್ಷ ಕೇಸ್ ದಾಖಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 1,96,427 ಹೊಸ ಕೇಸ್ ಪತ್ತೆಯಾಗಿವೆ. ಸಾವಿನ ಪ್ರಮಾಣ 3,511 ಇದೆ. ಚೇತರಿಕೆಯಾದವರ ಸಂಖ್ಯೆ 3,26,850. ಸಕ್ರಿಯ ಕೇಸ್ ಸಂಖ್ಯೆ 25,86,782, ಸಾವಿನ ಸಂಖ್ಯೆ 3,07,231 ಆಗಿದೆ.

ಸತತ 3ನೇ ದಿನವೂ ಹೆಚ್ಚಿದ ಮೃತರ ಸಂಖ್ಯೆ: ರಾಜ್ಯದಲ್ಲಿ ಸತತ ಮೂರನೇ ದಿನವೂ ಮರಣ ಪ್ರಮಾಣ ದರ ಶೇ. 2ಕ್ಕಿಂತ ಹೆಚ್ಚಿದೆ. ಮಂಗಳವಾರ ಒಂದೇ ದಿನ 588 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಒಟ್ಟು ಸಂಖ್ಯೆ 26,399ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 22,758 ಸೋಂಕು ಪ್ರಕರಣ ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ. 21.13 ತಲುಪಿದೆ. ಬೆಂಗಳೂರಿನಲ್ಲಿ 350, ಬೆಳಗಾವಿ 24, ಬಳ್ಳಾರಿ 20, ಶಿವಮೊಗ್ಗ 19, ಮೈಸೂರು 17, ಉತ್ತರ ಕನ್ನಡ 15, ತುಮಕೂರು 14, ಧಾರವಾಡ 12, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ ಮತ್ತು ಕಲಬುರಗಿ ತಲಾ 11, ದಕ್ಷಿಣ ಕನ್ನಡ 10 ಸೇರಿ ಒಟ್ಟು 588 ಮಂದಿ ಸಾವನ್ನಪ್ಪಿದ್ದು, ದಿನದ ಮರಣ ಪ್ರಮಾಣ ದರ ಶೇ. 2.58 ಇದೆ.

ಲಾಕ್​ಡೌನ್ ಜತೆಗೆ ಕೋವಿಡ್ ಪರೀಕ್ಷೆಗಳ ಸಂಖ್ಯೆ ಕಡಿಮೆ ಆಗಿದೆ. ಸೋಂಕು ಇಳಿಕೆಯಾಯಿತು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೋವಿಡ್ ಪರೀಕ್ಷೆಗಳ ಸಂಖ್ಯೆ ಒಂದು ಲಕ್ಷಕ್ಕೆ ಹೆಚ್ಚಿಸಿ, ಸೋಂಕು ಪ್ರಕರಣಗಳ ಸಂಖ್ಯೆ ಶೇ. 5ಕ್ಕಿಂತ ಕಡಿಮೆ ವರದಿಯಾದಲ್ಲಿ ಸೋಂಕು ಇಳಿಕೆಯಾಗಿದೆ ಎಂದು ಹೇಳಬಹುದು. ಲಾಕ್​ಡೌನ್ ತೆರವು ಮಾಡಿದ ನಂತರದ ಪರೀಕ್ಷೆ ಪ್ರಮಾಣ ಹಾಗೂ ಪ್ರಕರಣಗಳ ಸಂಖ್ಯೆ ಆಧರಿಸಿ ಸೋಂಕು ಇಳಿಕೆಯಾಗಿದೆಯೇ ಎಂಬುದನ್ನು ಹೇಳಲು ಸಾಧ್ಯ.

| ಡಾ. ಗಿರಿಧರ ಬಾಬು ಕೋವಿಡ್ ಟಾಸ್ಕ್ ಫೋರ್ಸ್​ನ ಸದಸ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net