

ಚನ್ನರಾಯಪಟ್ಟಣ: ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರೆ ಅದಕ್ಕೆ ಅಡಿಪಾಯ ಹಾಕಿದ್ದು ಕೆಂಪೇಗೌಡರು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಬಣ್ಣಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಘಟಕದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸುವಲ್ಲಿ ಕೆಂಪೇಗೌಡರು ಪ್ರಮುಖ ಪಾತ್ರ ವಹಿಸಿದ್ದರು. ಅಂದು ಅವರು ನಿರ್ಮಿಸಿದ ಬೆಂಗಳೂರು ನಗರ ಇಂದು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಬೆಂಗಳೂರು ನಗರ ನಿರ್ಮಿಸಿದ ಕೆಂಪೇಗೌಡರ ಹೆಸರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಗಿದ್ದು, ಕೆಂಪೇಗೌಡರ 108 ಅಡಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ ಎಂದರು.
ಕೆಂಪೇಗೌಡರ ಶೌರ್ಯ, ಸಾಹಸ ದೂರದೃಷ್ಟಿಗೆ ಹೆಸರಾಗಿದ್ದು ಬೆಂಗಳೂರು ನಗರವನ್ನು ಜಾತಿ ಆಧಾರಿತವನ್ನಾಗಿ ಮಾಡದೆ ವೃತ್ತಿ ಆಧಾರಿತ ಭೂಮಿಯನ್ನಾಗಿ ಮಾಡಿದರು. ನೂರಾರು ವರ್ಷಗಳ ಹಿಂದೆಯೇ ರಸ್ತೆ ಬದಿಯಲ್ಲಿ ಸಾಲುಮರಗಳು, ದನಕರು, ಪ್ರಾಣಿಪಕ್ಷಿಗಳು ನೀರು ಕುಡಿಯಲು ನೀರಿನ ತೊಟ್ಟಿಗಳು ಹಾಗೂ ರೈತರ ಅನುಕೂಲಕ್ಕಾಗಿ ಕೆರೆಕಟ್ಟೆಗಳ ನಿರ್ಮಾಣ ಮಾಡಿದ್ದರು ಎಂದು ತಿಳಿಸಿದರು.
ಚನ್ನರಾಯಪಟ್ಟಣದಲ್ಲಿ ಗುರುಭವನದ ಬಳಿ ಇರುವ ಕೆಂಪೇಗೌಡ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಪೂರ್ವಭಾವಿ ಸಭೆಯಲ್ಲಿ ಮುಖಂಡರು ಮನವಿ ಮಾಡಿದ್ದು, ಶೀಘ್ರ ಸಭೆ ದಿನಾಂಕ ನಿಗದಿಪಡಿಸಿ ಎಲ್ಲ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣವೇ ನಮ್ಮ ಸಂವಿಧಾನದ ಆಶಯ. 500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಿಸುವ ದೂರದೃಷ್ಟಿಯಿಂದ ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವಾಣಿಜ್ಯ ಕೇಂದ್ರವನ್ನಾಗಿಸಿದ್ದರು ಎಂದರು.
ಹೃದ್ರೋಗ ತಜ್ಞ ಡಾ.ಕೆ.ನಾಗೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಹೆಚ್ಚಾಗಿದ್ದು, ಸಂಚಾರ ನಿಯಮ ಹಾಗೂ ತಾಳ್ಮೆ ಜಾಗೃತಿ ಅವಶ್ಯವಾಗಿದೆ. ಕರ್ತವ್ಯದ ಒತ್ತಡದಲ್ಲಿ ವೇಗವಾಗಿ ವಾಹನ ಚಲಾಯಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡದೆ ಸೀಮಿತ ವೇಗದಲ್ಲಿ ವಾಹನ ಚಲಾಯಿಸಬೇಕು ಎಂದರು.
ಸಾರಿಗೆ ಸಂಸ್ಥೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಾಗೂ ನಿವೃತ್ತಿ ಹೊಂದುತ್ತಿರುವ ಸಂಚಾರಿ ನಿಯಂತ್ರಕರಾದ ಕೆ.ಎನ್.ನಾಗೇಶ್, ತೋಂಟಾರಾಧ್ಯ, ಪ್ರಭಾಕರ್, ಚಾಲಕರಾದ ಎಚ್.ಬಿ.ಚಂದ್ರಶೇಖರ್, ಬೋರೇಗೌಡ, ಮಳಲಿಗೌಡ, ರವೀಶ್, ದೊರೆಸ್ವಾಮಿ, ರವಿ ಅವರನ್ನು ಗೌರವಿಸಲಾಯಿತು. ನವೋದಯ ವಿದ್ಯಾ ಶಾಲೆಯ ಉಪನ್ಯಾಸಕ ಮಂಜಪ್ಪ, ಘಟಕ ವ್ಯವಸ್ಥಾಪಕ ಅಲೀಮುಲ್ಲಾಖಾನ್, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ನಾಡಪ್ರಭು ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಕಾಂಗ್ರೆಸ್ ಮುಖಂಡ ಹಣತಿ ಆನಂದ್, ಉದ್ಯಮಿ ಯೋಗೇಶ್ ಇತರರಿದ್ದರು.