ಶನಿವಾರಸಂತೆ: ಕನ್ನಡ ನಾಡಿನಲ್ಲಿ ಹುಟ್ಟಿ ಅಭಿವೃದ್ದಿ ಮೂಲಕ ದೇಶ ಮತ್ತು ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ, ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಚಂದ್ರಕಾಂತ್ ಅಭಿಪ್ರಾಯಪಟ್ಟರು.
ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಶನಿವಾರಸಂತೆ ಕೆಂಪೇಗೌಡ ಜಯಂತೋತ್ಸವ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬೆಂಗಳೂರು ನಿರ್ಮಾಪಕ ಹಾಗೂ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಬೆಂಗಳೂರು ವಿಶ್ವ ಮಟ್ಟದಲ್ಲಿ ಸಮೃದ್ಧಿಗೊಳ್ಳುತ್ತಿದ್ದು ಇದಕ್ಕೆ ಕಾರಣಕರ್ತರಾದ ಬೆಂಗಳೂರನ್ನು ಕಟ್ಟಿದ ಕೆರೆಗಳನ್ನು ಕಟ್ಟಿಸಿದ ಅಭಿವೃದ್ಧಿಯ ಹರಿಕಾರ ಕೆಂಪೇಗೌಡರನ್ನು ನಾವೆಲ್ಲರೂ ಸದಾ ಸ್ಮರಿಸಬೇಕಾಗುತ್ತದೆ ಎಂದರು.
ಶನಿವಾರಸಂತೆ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್.ರಘು ಮಾತನಾಡಿ, ಕೆಂಪೇಗೌಡರು ಬೆಂಗಳೂರನ್ನು ಕಟ್ಟುವ ಸಂದರ್ಭದಲ್ಲಿ ಒಂದು ಜಾತಿಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲ ಜಾತಿ-ಜನಾಂಗದವರನ್ನು ಪರಿಗಣನೆಗೆ ತೆಗೆದುಕೊಂಡು ಬೆಂಗಳೂರನ್ನು ಕಟ್ಟಿದ್ದಾರೆ. ಕೆಂಪೇಗೌಡರು ಪ್ರತಿಯೊಂದು ಅಭಿವೃದ್ಧಿ ಕಾರ್ಯದಲ್ಲಿ ಎಲ್ಲ ಜಾತಿ-ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು ಎಂದರು.
ಸಮಿತಿ ಪದಾಧಿಕಾರಿ ಎ.ಎಂ.ಆನಂದ್, ದುಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಜೆ.ಗಿರೀಶ್ ಮಾತನಾಡಿದರು. ಕೆಂಪೇಗೌಡರ ಜಯಂತ್ಯುತ್ಸವ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಲಾಯಿತು.
ಶನಿವಾರಸಂತೆ ಗ್ರಾಪಂ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಪ್ರಮುಖರಾದ ರಾಮಚಂದ್ರ, ಪ್ರಭಾಕರ್, ಯೋಗಾನಂದ್, ಎಚ್.ಆರ್.ಹರೀಶ್‌ಕುಮಾರ್, ಮಾಜಿ ಸೈನಿಕ ಪರಮೇಶ್, ದುಂಡಳ್ಳಿ ಗ್ರಾಪಂ ಸದಸ್ಯೆ ಪೂರ್ಣಿಮಾ ಕಿರಣ್, ಯೋಗೇಶ್, ಪ್ರಣೀತ್, ಯತೀಶ್, ದಿನೇಶ್, ಕೇಶವಮೂರ್ತಿ, ರಮೇಶ್, ಕೃಷ್ಣಮೂರ್ತಿ, ಸತೀಶ್, ಶರಣ್ ಹಿರಿಕರ ಇತರರಿದ್ದರು.