

ಹುಬ್ಬಳ್ಳಿ: ವಂದೇ ಭಾರತ್ ರೈಲು ಜೂ. 27 ರಿಂದ ಕೆಎಸ್‌ಆರ್ ಬೆಂಗಳೂರು - ಧಾರವಾಡ ಮಧ್ಯೆ ಸಂಚಾರ ಪ್ರಾರಂಭಿಸಲಿದೆ.
ಧಾರವಾಡ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ವರ್ಚುಯಲ್ ಆಗಿ ಈ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಪ್ರತಿ ಮಂಗಳವಾರ ಹೊರತು ಪಡಿಸಿ, ವಾರದ ಆರು ದಿನಗಳಲ್ಲಿ ಈ ರೈಲು ಸಂಚರಿಸಲಿದೆ. ಬೆಳಗ್ಗೆ 5.45 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ಈ ರೈಲು, 5.55 ಕ್ಕೆ ಯಶವಂತಪುರ, 9.15 ಕ್ಕೆ ದಾವಣಗೆರೆ, 11.30 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ, ಮಧ್ಯಾಹ್ನ 12.10 ಕ್ಕೆ ಧಾರವಾಡ ತಲುಪುವುದು.
ಮರಳಿ ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.15 ಕ್ಕೆ ಹೊರಟು, 1.35 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ, 3.38 ಕ್ಕೆ ದಾವಣಗೆರೆ, ರಾತ್ರಿ 7.13 ಕ್ಕೆ ಯಶವಂತಪುರ ಹಾಗೂ 7.45 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.
ಕೆಎಸ್‌ಆರ್ ಬೆಂಗಳೂರು ಮತ್ತು ಧಾರವಾಡ ಮಧ್ಯೆ ಸಂಚರಿಸುವ ಈ ವಂದೇ ಭಾರತ್ ರೈಲು ಸದ್ಯ 8 ಬೋಗಿಗಳೊಂದಿಗೆ ಸಂಚರಿಸಲಿದೆ. ಪ್ರಯಾಣಿಕರ ಸ್ಪಂದನೆ ಗಮನಿಸಿ, ಬೋಗಿಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.