

ಆನೇಕಲ್: ರಸ್ತೆ ಅಪಘಾತಗಳನ್ನು ತಪ್ಪಿಸಲು ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಸಾವಿನ ಸಂಖ್ಯೆ ಕಡಿಮೆಯಂತೂ ಆಗುತ್ತಿಲ್ಲ. ಅದರಲ್ಲೂ ಬೆಂಗಳೂರು- ಹೊಸೂರು ಹೈವೇ ಆಕ್ಸಿಡೆಂಟ್ ಜೋನ್ ಆಗಿ ಕನ್ವರ್ಟ್ ಆಗಿದ್ದು, ಈ ಯಮರೂಪಿ ರಸ್ತೆ ಮೇಲೆ ಆಗಿರುವ ಅಪಘಾತಗಳ ಸಂಖ್ಯೆಗೇನೂ ಕಮ್ಮಿ ಇಲ್ಲ.
ಬೆಂಗಳೂರು- ಹೊಸೂರು ಹೆದ್ದಾರಿ ಬೈಕ್ ಸವಾರರಿಗೆ ಯಮ ಸ್ವರೂಪಿಯಂತಾ ಗಿದೆ. ಎಷ್ಟೇ ಪ್ರಯತ್ನ ಪಟ್ಟು ಹಲವು ರೂಲ್ಸ್ ಮಾಡಿದ್ರೂ ಬೈಕ್ ಸವಾರರ ಪ್ರಾಣ ಉಳಿಸೋಕೆ ಆಗ್ತಿಲ್ಲ, ಇದನ್ನು ನಾವ್ ಹೇಳ್ತಿಲ್ಲ, ಬೆಂಗಳೂರು ಎಲಿವೇಟೆಡ್ ಟೊಲ್ ವೇ ಪ್ರೈವೆಟ್ ಲಿಮಿಟೆಡ್ ನ ಡೇಟಾ ಹೇಳುತ್ತಿರುವ ಸತ್ಯ..! ಮಡಿವಾಳ ರಸ್ತೆ ಅಂತ್ಯವಾಗಿ ಸಿಂಗಸಂದ್ರದಿಂದ ಶುರುವಾಗುವ ಈ ಅಪಘಾತದ ಅಪಾಯ ಕರ್ನಾಟಕ ತಮಿಳುನಾಡು ಗಡಿ ಅತ್ತಿಬೆಲೆಯವರೆಗೂ ಇರುತ್ತೆ.ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿ ಫ್ಲೈಓರ್ ಸರಣಿ ಅಪಘಾತಗಳ ಕಾರಣ ಕುಖ್ಯಾತಿಗೆ ಪಡೆದುಕೊಳ್ಳುತ್ತಿದೆ.
ಇತ್ತೀಚೆಗೆ ಹೆದ್ದಾರಿ ಮದ್ಯೆ ಸಿಮೆಂಟ್ ಬ್ಯಾರಿಕೇಡ್ ಗಳ ಅಳವಡಿಕೆ ನಡೆಯುತ್ತಿದೆ ಆದರೆ ರಸ್ತೆ ದುರಸ್ತಿ ಮಾಡುವಾಗ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವೇ ಇಲ್ಲದಂತೆ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು ಇದರಿಂದಾಗಿ ಎಲ್ಲೆಂದರಲ್ಲಿ ಜನ ರಸ್ತೆದಾಟಲು ಹೋಗಿ ಸರಣಿ ಅಪಘಾತಗಳು ನಡೆಯುತ್ತಿದೆ. ಅವೈಜ್ಞಾನಿಕವಾಗಿ ರಸ್ತೆ ಉಬ್ಬುಗಳು ಹಾಗೂ ಕಣ್ಣಿಗೆ ಕಾಣಿಸದ ಸಿಗ್ನಲ್ ಗಳನ್ನು ಅಳವಡಿಕೆ ಮಾಡುತ್ತಿದ್ದು ಇದು ಜನರ ಜೀವನಕ್ಕೆ ಕಂಟಕವಾಗಿ ಪರಿಣಮಿಸಿದೆ.
2018 ರಿಂದ ಈವರೆಗೆ ಇದೇ ರಸ್ತೆಯಲ್ಲಿ 350ಕ್ಕೂ ಅದಿಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.ಎಲೆಕ್ಟ್ರಾನಿಕ್ ಫ್ಲೈಓರ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ44 ರಲ್ಲಿ ಬೈಕ್ ಸವಾರರು ಜೀವ ಹಿಡಿದುಕೊಂಡೇ ಹೋಗಬೇಕು ಅನ್ನೋ ಸತ್ಯ ಬಯಲಾಗಿದೆ. ಆಗಿರುವ ಅಪಘಾತಗಳ ಬಗ್ಗೆ ಒಂದು ವಿಷಯ ಸ್ಪಷ್ಟವಾಗಿದೆ, ಸತ್ತವರಲ್ಲಿ ಬೈಕ್ ಸವಾರರ ಪಾಲು ಶೇಕಡಾ 90 ರಷ್ಟಿದ್ದು, ಇದ್ರಲ್ಲಿ ಡ್ರಿಂಕ್ ಡ್ರೈವ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳ ಸಾವು ಹೆಚ್ಚಿನ ಪ್ರಮಾಣದಲ್ಲಿದೆ.
ಅವೈಜ್ಞಾನಿಕ ಡಿವೈಡರ್,ಸರ್ವೀಸ್ ರಸ್ತೆಯಲ್ಲಿ ಗುಂಡಿ, ಹಾಗೂ ಯು ಟರ್ನ್ ತೆಗೆದುಕೊಳ್ಳುವ ಜಾಗದಲ್ಲಿ ಯಾವುದೇ ಸೂಚನಾ ಫಲಕ ಇರದೇ ಇರುವ ಕಾರಣ ಹಲವು ಅಪಘಾತಗಳಾಗಿವೆ. ಒಟ್ಟಿನಲ್ಲಿ ಬೆಂಗಳೂರು ಹೊಸೂರು ರಸ್ತೆ ಮೇಲೆ ತೆರಳುವ ದ್ವಿಚಕ್ರ ವಾಹಮ ಸವಾರರು ಹೆಚ್ಚು ಜಾಗರೂಕತೆ ವಹಿಸಬೇಕಿದೆ.(ದಿಗ್ವಿಜಯ ನ್ಯೂಸ್)