

ಬೆಂಗಳೂರು: ಶೈಕ್ಷಣಿಕ ಪ್ರಗತಿಗೆ ಹಾಗೂ ಜ್ಞಾನ ಸಂಪಾದನೆಗೆ ನಿರಂತರ ಕಲಿಕೆ ಮುಖ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ 'ಬ್ರಿಟಿಷ್ ಕೌನ್ಸಿಲ್ ಡಿಜಿಟಲ್ ಲೈಬ್ರರಿ ವಾಲ್'ಅನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ತರಗತಿಯೊಳಗೆ ಸಂಪಾದಿಸುವ ಜ್ಞಾನದ ಜತೆಗೆ, ಅಧ್ಯಯನದ ಮೂಲಕ ಗಳಿಸುವ ಜ್ಞಾನದಿಂದ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಲು ಸಾಧ್ಯ. ಆಗ ವಿವಿಧ ಕ್ಷೇತ್ರಗಳಲ್ಲಿ ಏನೇನು ಬದಲಾವಣೆಗಳಾಗುತ್ತಿವೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಡಿಜಿಟಲ್ ಗ್ರಂಥಾಲಯದ ಮೂಲಕ ಸುಲಭವಾಗಿ ಅಧ್ಯಯನಕ್ಕೆ ಬೇಕಾದ ಅಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
ಬ್ರಿಟಿಷ್ ಕೌನ್ಸಿಲ್ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಡಿಜಿಟಲ್ ಗ್ರಂಥಾಲಯ ಸೌಲಭ್ಯ ನೀಡಿದೆ. ಅಧ್ಯಯನ ನಿರತರಿಗೆ ಇದರಿಂದ ಉಚಿತವಾಗಿ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ. ಇದು ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಬ್ರಿಟಿಷ್ ಕೌನ್ಸಿಲ್ನ ರಾಷ್ಟ್ರೀಯ ನಿರ್ದೇಶಕಿ ಡಾ. ಆಲಿಸನ್ ಬ್ಯಾರೆಟ್ ಮಾತನಾಡಿ, ಯುವಜನರೊಂದಿಗೆ ಸಂಪರ್ಕ ಸಾಧಿಸಿದಾಗ ಜ್ಞಾನ ಹಾಗೂ ಸಂಸತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಆಗ ಸ್ಪರ್ಧಾತ್ಮಕ ಯುಗದಲ್ಲಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಿದ್ದೇವೆ. ಇದರಿಂದ ಕರ್ನಾಟಕದಲ್ಲಿರುವ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಂಪನ್ಮೂಲಗಳು ಲಭ್ಯವಾಗುತ್ತವೆ ಎಂದರು.
ಬೆಂಗಳೂರು ನಗರ ವಿ.ವಿ.ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ (ಆಡಳಿತ) ಟಿ.ಜವರೇಗೌಡ, ಬ್ರಿಟಿಷ್ ಕೌನ್ಸಿಲ್ ದಕ್ಷಿಣ ಭಾರತದ ನಿರ್ದೇಶಕ ಜನಕ ಪುಷ್ಪನಾಥನ್ ಇತರರಿದ್ದರು.