

ಬೆಂಗಳೂರು: ರಾಜ್ಯ ಕ್ರೀಡಾ ಇಲಾಖೆ ವತಿಯಿಂದ 2023-24ನೇ ಸಾಲಿನ ಬೆಂಗಳೂರು ನಗರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸೆ.26 ಹಾಗೂ 27ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಅಥ್ಲೆಟಿಕ್ಸ್, ಟೆನ್ನಿಸ್, ಕುಸ್ತಿ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಕಬ್ಬಡಿ, ಖೋ-ಖೋ, ಬಿಲ್ಲುಗಾರಿಕೆ, ವೇಟ್ ಲಿಫ್ಟಿಂಗ್, ಟೆಕ್ವಾಂಡೋ, ಜೂಡೋ, ಬಾಕ್ಸಿಂಗ್, ಹಾಕಿ, ಯೋಗ ಸಹಿತ ಇತರ ಸ್ಪರ್ಧೆಗಳು ನಡೆಯಲಿವೆ. ಜಿಲ್ಲಾ ಮಟ್ಟದಲ್ಲಿ ಆಯೋಜಿಸಿರುವ ಕ್ರೀಡೆಗಳಲ್ಲಿ ವಿಜೇತರಾದವರು ಮಾತ್ರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶ ಸಿಗುವ ಕಾರಣದಿಂದ ಜಿಲ್ಲಾ ಮಟ್ಟದ ಕ್ರೀಡೆಗಳಿಗೆ ಮಹತ್ವ ಪಡೆಯಲಿದೆ.
ಆಯಾ ಜಿಲ್ಲೆಯ ಕ್ರೀಡಾಪಟುಗಳು ತಮ್ಮ ಜಿಲ್ಲೆಯಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಹೊಂದಿರುತ್ತಾರೆ. ಭಾಗವಹಿಸುವ ಸಮಯದಲ್ಲಿ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ ಕಾರ್ಡ್/ಶಾಲಾ ಕಾಲೇಜು ಮುಖ್ಯಸ್ಥರಿಂದ ಪತ್ರ ಹಾಗೂ ಬ್ಯಾಂಕಿನ ಪಾಸ್ ಬುಕ್ ದೃಢೀಕೃತ ನಕಲು ಪತ್ರವನ್ನು ತರುವುದು ಕಡ್ಡಾಯ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು ಸೆ.26ರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕ್ರೀಡಾಕೂಟದ ಉದ್ಘಾಟನಾ ಪಥಸಂಚಲನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿದೆ.
ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಕಂಠೀರವ ಕ್ರೀಡಾಂಗಣ, ಬೆಂಗಳೂರು ಇಲ್ಲಿ ಖುದ್ದಾಗಿ ಅಥವಾ ದೂ: 080-22239771, 9480886545 ಮೂಲಕ ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಶಶಿಕಲಾ ತಿಳಿಸಿದ್ದಾರೆ.