ಬೆಂ. ಕೃಷಿ ವಿವಿ: 10 ದಿನದಲ್ಲಿ ಬೀಜ ಪರೀಕ್ಷಾ ವರದಿ ಸಿದ್ಧ

seed book
Published on

ಬೆಂಗಳೂರು: ಬೀಜ ಉದ್ದಿಮೆದಾರರಿಗೆ ಹತ್ತೇ ದಿನಗಳಲ್ಲಿ ಬೀಜ ಪರೀಕ್ಷಾ ವರದಿಯನ್ನು ನೀಡಲು ಅನುಕೂಲ ಕಲ್ಪಿಸುವ ನೂತನ ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯವನ್ನು ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಸ್ಥಾಪಿಸಲಾಗಿದೆ.

ಗುರುವಾರ ವಿವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಉತ್ತಮ ಬೆಳೆ ಬೆಳೆಯುವಲ್ಲಿ ಆರೋಗ್ಯಕರ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ. ಬೀಜ ಆರೋಗ್ಯ ಪರೀಕ್ಷೆಯು ಕೀಟ ಬಾಧೆ, ಶಿಲೀಂದ್ರಗಳು, ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಹರಡುವ ರೋಗಗಳ ಚಿಹ್ನೆಗಳನ್ನು ಕಂಡುಹಿಡಿಯುವುದು. ರೋಗಪೀಡಿತ ಬೀಜಗಳ ಸೋಂಕುಗಳನ್ನು ಹರಡುವುದರ ಜತೆಗೆ ಶೇ.15-90 ಇಳುವರಿ ಕುಂಠಿತಗೊಳ್ಳುತ್ತದೆ. ಇಂತಹ ಸೌಲಭ್ಯವನ್ನು 30 ದಿನಗಳಲ್ಲಿ ನೀಡುತ್ತಿದ್ದು, ಇದನ್ನು 10 ದಿನಗಳಲ್ಲಿ ನೀಡಲು ವಿವಿಯು ತಂತ್ರಜ್ಞಾನವನ್ನು ರೂಪಿಸಿದೆ ಎಂದರು.

ಕೃಷಿ ವಿವಿಯ ಸಸ್ಯರೋಗಶಾಸ್ತ್ರ ವಿಭಾಗವು ಸುಸಜ್ಜಿತ ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯ, ಮಾನ್ಯತೆ ಪಡೆದ ಅಂಗಾಂಶ ಕೃಷಿ ಬೆಳೆಗಳ ಪ್ರಮಾಣೀಕರಣ ಮತ್ತು ಮಾನ್ಯತೆ ಪಡೆದ ಸಸ್ಯರೋಗ ನಿರ್ಣಯ ಪ್ರಯೋಗಾಲಯ, ಎಲ್ಲ ಬೆಳೆಗಳ ಬೀಜ ಮತ್ತು ಸಸ್ಯ ಆರೋಗ್ಯ ಪರೀಕ್ಷಾ ಸೇವೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಬೀಜಗಳ ಉತ್ಪಾದನಾ ಉದ್ಯಮಗಳಿಗೆ ಮತ್ತು ಸಂಸ್ಥೆಗಳಿಗೆ ನೀಡಲು ಪ್ರಾರಂಭಿಸುತ್ತಿದೆ. ಕೃಷಿ ವಿವಿ ನೀಡುವ ಬೀಜ ಆರೋಗ್ಯ ಪರೀಕ್ಷಾ ವರದಿ ದೃಢಿಕರಣ ಪತ್ರ ಪಡೆದ ಖಾಸಗಿ ಸಂಸ್ಥೆಗಳು ಹೊರದೇಶಗಳಾದ ಥೈಲ್ಯಾಂಡ್, ಚೀನಾ, ನೆದರ್‌ಲ್ಯಾಂಡ್ ಮತ್ತು ಸ್ಪೇನ್ ದೇಶಗಳಿಗೆ ರಫ್ತು ಮಾಡಬಹುದಾಗಿದೆ. ಅಲ್ಲದೆ ಬೆಂಗಳೂರು, ಮುಂಬೈ, ಗುಜರಾತ್, ನವದೆಹಲಿಯಲ್ಲಿನ ಪ್ರಾದೇಶಿಕ ಸಸ್ಯ ಸಂಪರ್ಕ ತಡೆ ಕೇಂದ್ರಗಳಿಂದ ಸಲ್ಲಿಸಲಾದ 140 ವಿವಿಧ ಬೀಜಗಳನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಿ ಬೀಜ ಆರೋಗ್ಯ ವರದಿ ನೀಡಿರುತ್ತದೆ. ಬೀಜ ಪರೀಕ್ಷೆಯ ಲ್ಯಾಬ್ನಲ್ಲಿರುವ ಆಧುನಿಕ ತಂತ್ರಜ್ಞಾನವು ರೈತರ ಮತ್ತು ಉದ್ಯಮದ ವೃತ್ತಿಪರರಿಗೆ ತ್ವರಿತ ರೀತಿಯಲ್ಲಿ ಸೇವೆಯನ್ನು ನೀಡುವುದರ ಜತೆಗೆ ಜ್ಞಾನವನ್ನು ಹೆಚ್ಚಿಸುವುದರಲ್ಲಿ ಸಹಾಯಕವಾಗಲಿದೆ ಎಂದು ಡಾ. ಎಸ್.ವಿ.ಸುರೇಶ್ ವಿವರಿಸಿದರು.

ಇದೇ ವೇಳೆ ಬೀಜ ಆರೋಗ್ಯ ಪರೀಕ್ಷೆ ಕುರಿತ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಶಿಕ್ಷಣ ನಿರ್ದೇಶಕ ಡಾ. ಕೆ.ಸಿ.ನಾರಾಯಣಸ್ವಾಮಿ, ಕುಲಸಚಿವ ಡಾ. ಬಸವೇಗೌಡ, ಡೀನ್ (ಕೃಷಿ) ಡಾ. ಎನ್.ಬಿ.ಪ್ರಕಾಶ್, ಸಂಶೋಧನಾ ನಿರ್ದೇಶಕ ಡಾ.ವೆಂಕಟೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net