

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಕ್ಯಾಂಪಸ್ ಜಿಕೆವಿಕೆಯಲ್ಲಿ ಈ ವರ್ಷ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ 20 ಸಾವಿರ ಗಿಡಗಳನ್ನು ನೆಟ್ಟು ಹಸಿರು ಕ್ಯಾಂಪಸ್ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದರು.
ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿಯವರ ಕರೆಯಂತೆ ‘ಅಮ್ಮನಿಗಾಗಿ ಒಂದು ಮರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
‘ಅಮ್ಮನಿಗಾಗಿ ಒಂದು ಮರ’ ಭಾವನಾತ್ಮಕ ಕಾರ್ಯಕ್ರಮವಾಗಿದ್ದು ಪರಿಸರವು ತಾಯಿಗೆ ಸಮಾನವಾಗಿದ್ದು, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನುಷ್ಯನ ದುರಾಸೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದ್ದು ಪ್ರತಿ ವರ್ಷ ವಿಶ್ವದೆಲ್ಲೆಡೆ 10 ದಶಲಕ್ಷ ಹೆಕ್ಟೇರ್ ಕಾಡು ನಾಶವಾಗುತ್ತಿದೆ. ಇದರಿಂದ ಪರಿಸರ ಹಾಗೂ ಹವಾಮಾನದ ಮೇಲೆ ನೇರ ಪರಿಣಾಮ ಬೀರಲಿದೆ. ರಾಷ್ಟ್ರೀಯ ಅರಣ್ಯ ನೀತಿ ಗುರಿಯನ್ನು ತಲುಪಲು ಅರಣ್ಯ ಪ್ರದೇಶದಲ್ಲಿನ ಖಾಲಿ ಸ್ಥಳ, ಅರಣ್ಯೇತರ ಸರ್ಕಾರಿ ಸ್ಥಳ, ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯದ ಪ್ರದೇಶದಲ್ಲಿ ಹಸಿರೀಕರಣ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು.
ವಿದ್ಯಾರ್ಥಿಗಳಿಗೆ ಗಿಡಗಳ ಪೋಷಣೆ ಕಡ್ಡಾಯ:
ಪ್ರಸ್ತುತ ವರ್ಷದಿಂದ ಸ್ನಾತಕ ಪದವಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಗಿಡ ನೆಟ್ಟು 4 ವರ್ಷಗಳ ಕಾಲ ಪೋಷಿಸಲು ರೂಪುರೇಷೆಗಳನ್ನು ತಯಾರಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಲು ಸಹಕಾರಿಯಾಗುತ್ತದೆ, ಪರಿಸರದ ಸಂರಕ್ಷಣೆ ಜತೆಗೆ ಜೈವಿಕ ವೈವಿಧ್ಯತೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಕೃಷಿ ವಿವಿಯ ಆವರಣ ಹಾಗೂ ಹಾಸನದ ಕೃಷಿ ವಿದ್ಯಾಲಯ ಅವರಣದಲ್ಲಿ ಚಿಟ್ಟೆ ವನ ಆರಂಭಿಸಲು ಚಿಂತನೆ ನಡೆದಿದೆ ಎಂದು ಕುಲಪತಿಯವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಶಿಕ್ಷಣ ನಿರ್ದೇಶಕ ಡಾ. ಕೆ.ಸಿ ನಾರಾಯಣಸ್ವಾಮಿ, ಸಂಶೋಧನಾ ನಿರ್ದೇಶಕ ಡಾ. ಎಚ್.ಎಸ್. ಶಿವರಾಮು, ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್. ಮಧುಪ್ರಸಾದ್, ಡೀನ್ (ಕೃಷಿ) ಡಾ. ಎನ್.ಬಿ. ಪ್ರಕಾಶ್ ಹಾಗೂ ಇತರ ಅಧಿಕಾರಿಗಳು ಇದ್ದರು.