

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರತೀವರ್ಷ ನಡೆಸುವ ಕೃಷಿ ಮೇಳ ಮುಂದಿನ ನ.13ರಿಂದ ನಾಲ್ಕು ದಿನ ವಿವಿಯ ಕ್ಯಾಂಪಸ್ ಜಿಕೆವಿಕೆಯಲ್ಲಿ ನಡೆಯಲಿದೆ. ಈ ಬಾರಿ ‘ಸಮೃದ್ಧಿ ಕೃಷಿ - ವಿಕಸಿತ ಭಾರತ: ನೆಲ, ಜಲ, ಬೆಳೆ’ ಘೋಷವಾಕ್ಯ ಅಡಿಯಲ್ಲಿ ಮೇಳ ಸಂಘಟಿಸಲಾಗುತ್ತಿದೆ.
ಭವಿಷ್ಯದ ಕೃಷಿ ರಾಷ್ಟ್ರದ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾದ ನೆಲ, ಜಲ ಹಾಗೂ ಜೀವ ವೈವಿಧ್ಯತೆ ಮೇಲೆ ಅವಲಂಬಿತವಾಗಿದೆ. ಇವುಗಳನ್ನು ವೈಜ್ಞಾನಿಕವಾಗಿ ಜವಾಬ್ದಾರಿಯುತವಾಗಿ ಬಳಸಿ, ಸಂರಕ್ಷಿಸುವ ಮೂಲಕ ಸುಸ್ಥಿರ ಕೃಷಿ ಮತ್ತು ಕೃಷಿಕರ ಆದಾಯವೃದ್ಧಿ ಈ ಮೇಳದ ಆಶಯವಾಗಿದೆ. ವಿಕಸಿತ ಭಾರತದ ಪರಿಕಲ್ಪನೆಗೆ ಕೃಷಿ ಕ್ಷೇತ್ರದ ಕೊಡುಗೆ ಪ್ರತಿಪಾದಿಸುವ ವಿಶೇಷ ವೇದಿಕೆಯನ್ನು ಮೇಳವು ಕಲ್ಪಿಸಲಿದೆ ಎಂದು ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದ್ದಾರೆ.
ಕೃಷಿ ಮೇಳವು ಕೃಷಿಕರ ಆದಾಯ ಮೂಲ ಹೊರತಾಗಿ ಹೊಸ ಗಳಿಕೆಯ ಹಾದಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ವ್ಯವಸಾಯ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸಲು ಕೃಷಿ ಪ್ರವಾಸೋದ್ಯಮವನ್ನು ಉದದಿಮೆಯಾಗಿ ಪರಿಚಯಿಸಬೇಕಾಗಿದೆ. ಇದಕ್ಕಾಗಿ ವಿಶೇಷ ಮಾದರಿಯನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು. ಜತೆಗೆ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ, ಚರ್ಚಾಗೋಷ್ಠಿ, ಸಲಹಾ ಸೇವೆ, ಸಾಧಕ ಕೃಷಿಕರಿಗೆ ಪ್ರಶಸ್ತಿ ವಿತರಣೆ, ಗ್ರಾಮೀಣ ಕಲೆ, ಸಂಸ್ಕೃತಿ ಇತ್ಯಾದಿ ಕಾರ್ಯಕ್ಕೆ ವೇದಿಕೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.