

ಬೆಂಗಳೂರು: ಪ್ರಸಿದ್ಧ ಬನಶಂಕರಿ ದೇವಸ್ಥಾನದ ಹುಂಡಿಯನ್ನು ಇಂದು ಎಣಿಕೆ ಮಾಡಲಾಗಿದ್ದು 28.60 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಆದರೆ ಈ ಹಿಂದೆ ಸಂಗ್ರಹವಾಗುತ್ತಿದ್ದ ಕಾಣಿಕೆ ಹಣಕ್ಕೆ ಹೋಲಿಸಿದರೆ ಇದು ತೀರ ಕಡಿಮೆ ಎಂದು ಹೇಳಲಾಗಿದೆ.
ಕಳೆದ ವರ್ಷಗಳಲ್ಲಿ ಹುಂಡಿಯ ಹಣ 40-50 ಲಕ್ಷ ರೂ.ಗೂ ಮೀರುತ್ತಿತ್ತು. ಆದರೆ ಕೊವಿಡ್ನಿಂದಾಗಿ ಅದೂ ಕೂಡ ಕಡಿಮೆಯಾಗಿದೆ. ಅರ್ಧದಷ್ಟು ಮಾತ್ರ ಸಂಗ್ರಹವಾಗಿದೆ. ಈ ದೇವಾಲಯದಲ್ಲಿ ಕಳೆದ ಮಾರ್ಚ್‌ನಲ್ಲಿ 42.56 ಲಕ್ಷ ರೂ. ಸಂಗ್ರಹವಾಗಿತ್ತು. ಮೇನಲ್ಲಿ 17.05 ಲಕ್ಷ ರೂ.ಜೂನ್‌ನಲ್ಲಿ ಕೇವಲ 3.41 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿತ್ತು. ಆದರೆ ಕಳೆದ 2 ತಿಂಗಳಲ್ಲಿ 28.60 ಲಕ್ಷ ರೂ. ಸಂಗ್ರಹವಾಗಿದೆ. ಇದರಲ್ಲಿ ಭಕ್ತರು 2.01 ಲಕ್ಷ ರೂ. ರದ್ದಾದ ಸಾವಿರ ಹಾಗೂ 500 ರೂ. ನೋಟುಗಳನ್ನು ಹಾಕಿದ್ದಾರೆ.
ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಹೇರಲಾಗಿದ್ದ ಲಾಕ್‌ಡೌನ್ ಸಡಿಲಿಕೆ ನಂತರ ಕೆಲ ನಿಯಮಗಳೊಂದಿಗೆ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮೊದಲು ನಾನಾ ಕಷ್ಟಗಳನ್ನು ಹೇಳಿಕೊಂಡು ಬರುತ್ತಿದ್ದ ಭಕ್ತರಲ್ಲಿ ಈಗ ಕೋವಿಡ್‌ನಿಂದ ರಕ್ಷಿಸುವಂತೆ ಅಮ್ಮನಲ್ಲಿ ಬೇಡಿಕೊಳ್ಳುವವರೇ ಹೆಚ್ಚಿನವರಿದ್ದಾರೆ ಎನ್ನುತ್ತಾರೆ ದೇವಾಲಯ ಸಿಬ್ಬಂದಿ.
ಲಾಕ್‌ಡೌನ್ ಸಡಿಲಿಕೆ ನಂತರ ಇದೇ ಮೊದಲ ಬಾರಿಗೆ ಹುಂಡಿ ತೆರೆಯಲಾಗಿದ್ದು, 10ರಿಂದ 15 ಲಕ್ಷ ರೂ. ಸಂಗ್ರಹವಾಗುವ ನಿರೀಕ್ಷೆ ಹೊಂದಿದ್ದೆವು. ಆದರೆ 28.60 ಲಕ್ಷ ರೂ. ಸಂಗ್ರಹವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ ಬನಶಂಕರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ್, ಅಕ್ಟೋಬರ್ 2ಕ್ಕೆ ಸಮಿತಿಯ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ. 3 ವರ್ಷಗಳ ಅಧಿಕಾರವಧಿಯಲ್ಲಿ ದೇವಾಲಯದ ಹುಂಡಿಯಲ್ಲಿ 10.50 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ. ಸೀರೆ ಹರಾಜಿನಿಂದ 1.67 ಕೋಟಿ ರೂ., ವಿಶೇಷ ಸೇವಾ ದರ್ಶನದಿಂದ 2.60 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನಕ್ಕೆ ಬರುವವರ ಭಕ್ತರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ದೇಹದ ಉಷ್ಣಾಂಶ ಪರೀಕ್ಷಿಸಿ, ಸ್ಯಾನಿಟೈಸರ್ ನೀಡಿದ ನಂತರ ಒಳಗೆ ಪ್ರವೇಶ ನೀಡಲಾಗುತ್ತಿದೆ. ದೇವರ ದರ್ಶನಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹರಕೆ ರೂಪದಲ್ಲಿ ಅಮ್ಮನಿಗೆ ಅರ್ಪಿಸಿರುವ ಸೀರೆಗಳ ಹರಾಜು ಪ್ರಕ್ರಿಯೆ ಶುಕ್ರವಾರ (ಸೆ.25) ನಡೆಯಲಿದ್ದು, ವಿಶೇಷ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಿಂಗಯ್ಯ ತಿಳಿಸಿದ್ದಾರೆ.